'ಬ್ರಾಹ್ಮಣರ ಅವಹೇಳನ' ಪಠ್ಯ ಭಾಗ ಕೈಬಿಡಲು ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು, ಡಿ.17: ಸಾರ್ವಜನಿಕ ಶಿಕ್ಷಣ ಇಲಾಖೆಯ ಆರನೆ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಾಠ-7ರ ಅಂಶಗಳನ್ನು ಉಲ್ಲೇಖಿಸಿ ಈ ಪಠ್ಯಭಾಗ ಬ್ರಾಹ್ಮಣ ಜನಾಂಗದ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗುರುವಾರವೆ ಈ ಸಂಕೀರ್ಣ ಪಠ್ಯಭಾಗವನ್ನು ತಕ್ಷಣದಿಂದಲೇ ಕೈಬಿಡುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಪಾಠದಲ್ಲಿ ಹೊಸ ಧರ್ಮಗಳ ಉದಯದ ಕಾರಣವನ್ನು ವಿವರಿಸುತ್ತಾ, ‘ಸಂಸ್ಕೃತ ಪುರೋಹಿತ ಭಾಷೆಯಾದ್ದರಿಂದ ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಯಾಗ, ಯಜ್ಞಗಳಲ್ಲಿ ಆಹಾರ ಧಾನ್ಯ, ಹಾಲು, ತುಪ್ಪಗಳನ್ನು ಹವಿಸ್ಸಿನ ರೂಪದಲ್ಲಿ ದಹಿಸಲಾಗುತ್ತಿತ್ತು. ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿತ್ತು. ಇದರಿಂದಾಗಿ ಆಹಾರದ ಅಭಾವ ಸೃಷ್ಟಿಯಾಗುತ್ತಿತ್ತು. ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲಾಗುತ್ತಿದ್ದ ಪುರೋಹಿತ ವರ್ಗ ಹಲವು ಸವಲತ್ತುಗಳನ್ನು ಹೊಂದಿದ್ದರು. ಇದೇ ಸಂದರ್ಭದಲ್ಲಿ ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಉದಯವಾದ ಹಲವು ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು. ಇವೆಲ್ಲದರ ಪರಿಣಾಮವಾಗಿ ಉದಯಿಸಿದ ಧರ್ಮಗಳ ಪೈಕಿ ಜೈನ ಮತ್ತು ಬೌದ್ಧ ಧರ್ಮಗಳು ಪ್ರಮುಖವಾದವು’ ಎಂಬ ಅರ್ಥದ ಪರಿಚಯ ಪಠ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಈ ಪೀಠಿಕೆಯು ಅನಗತ್ಯ ಹಾಗೂ ಆ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯ ಬೋಧನೆಯಾಗಿದೆ ಎನ್ನುವುದು ಬಹುಜನರ ಅಭಿಪ್ರಾಯವಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದೇ ತರಗತಿಯ ಪಾಠ 6ರಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಕುರಿತಾದ ಪಠ್ಯದಲ್ಲಿ ಈ ಧರ್ಮಗಳ ಕುರಿತಾದ ಪರಿಚಯ ಪ್ರಯತ್ನದಲ್ಲಿ ಬೇರೆ ಯಾವುದೆ ಜಾತಿ, ಸಮುದಾಯದ ಕುರಿತ ಅವಹೇಳನಕಾರಿಯಾದ ಪೀಠಿಕಾ ಸ್ವರೂಪದ ಪರಿಚಯವನ್ನು ನೀಡಿಲ್ಲ. ಹಾಗಾಗಿ ಈ ರೀತಿಯ ಪ್ರಚೋದನಾಕಾರಿಯಾದ ಪರಿಚಯಗಳು ಸಮಾಜದಲ್ಲಿ ಗೊಂದಲ ಮೂಡಿಸುವುದಲ್ಲದೆ, ಯಾವುದೆ ಒಂದು ನಿರ್ದಿಷ್ಟ ಸಮಾಜ, ಜಾತಿ, ಸಮುದಾಯದ ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ ಹಾಗಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 6ನೆ ತರಗತಿಯ ಸಮಾಜ ವಿಜ್ಞಾನ ಭಾಗ 1ರ ಪುಟ ಸಂಖ್ಯೆ 82 ಮತ್ತು 83ರಲ್ಲಿರುವ ಹೊಸ ಧರ್ಮಗಳು ಏಕೆ ಉದಯಿಸಲ್ಪಟ್ಟವು ಎಂಬ ಪೀಠಿಕಾ ಸ್ವರೂಪದ ಅನಗತ್ಯ ಹಾಗೂ ಆ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯ ಬೋಧನೆಯನ್ನು ಈ ಶೈಕ್ಷಣಿಕ ಸಾಲಿನಿಂದ ಕೈ ಬಿಡಲು ಕೂಡಲೆ ಅಗತ್ಯು ಸುತ್ತೋಲೆ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿ ಸುರೇಶ್ ಕುಮಾರ್ ಟಿಪ್ಪಣಿ ನೀಡಿದ್ದಾರೆ.
ಅಲ್ಲದೆ, ಇಲಾಖೆಯ 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ, ಭಾಷೆ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಇಂತಹ ಯಾವುದೇ ಸಂಕೀರ್ಣ ವಿಷಯಗಳ ಕುರಿತು ಶಿಕ್ಷಕರು ಮತ್ತು ವಿಷಯ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಅವರಿಂದ ವರದಿ ಪಡೆದು 15 ದಿನಗಳಲ್ಲಿ ವರದಿ ಸಲ್ಲಿಸಬೇಕೆಂದೂ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ವರದಿ ಪಡೆದ ನಂತರ ವರದಿಯಲ್ಲಿ ಅಂತಹ ಪಠ್ಯಭಾಗಗಳಿದ್ದರೆ ಅದರ ಪರಾಮರ್ಶೆಗೆ ತಜ್ಞರ ಸಮಿತಿ ನೇಮಕ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸ್ವತಃ ಮಂತ್ರಾಲಯ ಶ್ರೀ ಕ್ಷೇತ್ರದ ಸ್ವಾಮೀಜಿ ನನಗೆ ದೂರವಾಣಿ ಕರೆ ಮಾಡಿ ಬ್ರಾಹ್ಮಣ ಸಮುದಾಯದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಯಾವುದೇ ಪಠ್ಯಪುಸ್ತಕಗಳ ಪರಿಷ್ಕರಣೆಯಾಗಿಲ್ಲ. ಇಲ್ಲವೇ ಹೊಸ ಪಾಠಭಾಗಗಳನ್ನು ಸೇರ್ಪಡೆ ಮಾಡಿಲ್ಲ. ಈ ಹಿಂದೆಯೇ ಆಗಿರುವ ಹಾಗೂ ಪ್ರಸ್ತುತ ಬೆಳಕಿಗೆ ಬಂದಿರುವ ಈ ಪ್ರಮಾದ ಸರಿಪಡಿಸಲು ಇಂದೇ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಸಮಗ್ರ ಪಠ್ಯ ಅವಲೋಕನಕ್ಕೆ ಕ್ರಮ ವಹಿಸಲಾಗುತ್ತದೆ”.
-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ







