ಬೇರೆಯವರಿಗೆ ಹತ್ತಿರವಾಗಲು ಕಾಂಗ್ರೆಸನ್ನು ದೂರುವುದು ಕುಮಾರಸ್ವಾಮಿಗೆ ಅನಿವಾರ್ಯ: ಕೆ.ಜೆ.ಜಾರ್ಜ್

ಚಿಕ್ಕಮಗಳೂರು, ಡಿ.17: ವಿಧಾನ ಪರಿಷತ್ ಸಭಾಪತಿಗಳಿಗೆ ಕಲಾಪ ನಡೆಸಲು ಅವಕಾಶ ನೀಡದೇ ಸಂವಿಧಾನ ಭಾಹಿರವಾಗಿ ಉಪಸಭಾಪತಿಗಳಿಗೆ ಸಭೆ ನಡೆಸಲು ಅವಕಾಶ ನೀಡಿದ್ದರಿಂದ ಕಾಂಗ್ರೆಸ್ ಸದಸ್ಯರು ಮೇಲ್ಮನೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಸಮರ್ಥನೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಾಯ ಮಂಡಿಸಿದ ಮೇಲೆ ಅದು ಅಂಗೀಕರವಾಗಲು 10 ದಿನಗಳ ಕಾಲಾವಕಾಶ ವಿರುತ್ತದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಕಲಾಪದ ಸಂದರ್ಭದಲ್ಲಿ ಅಧ್ಯಕ್ಷರೂ ಇದ್ದರು, ಅವರ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಅನುಮೋದನೆಯಾಗಿಲ್ಲ. ಆದರೆ ಉಪಸಭಾಪತಿ ನೇತೃತ್ವದಲ್ಲಿ ಕಲಾಪ ನಡೆಸುವ ಉದ್ದೇಶದಿಂದ ಬಾಗಿಲು ಬಂದ್ ಮಾಡಿಸಿ ಉಪಸಭಾಪತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಮುಂದಾಗಿದ್ದರು. ಇದು ಸಂವಿಧಾನ ಬಾಹಿರವಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ ಎಂದರು.
ಜೆಡಿಎಸ್‍ನ ಇಂದಿನ ಸ್ಥಿತಿಗೆ ಕಾಂಗ್ರೆಸ್ ಕಾರಣವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಚ್ಡಿಕೆ ಮಂತ್ರಿಮಂಡಲದಲ್ಲಿ ನಾನು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸರಕಾರ ಉರುಳುವ ತನಕ ಎಲ್ಲರೂ ಜೊತೆಯಾಗಿಯೇ ಇದ್ದೆವು. ಅಂದು ಕಾಂಗ್ರೆಸ್ ತನಗೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಈಗ ಬೇರೆಯವರಿಗೆ ಹತ್ತಿರವಾಗಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ರೈತ ವಿರೋಧಿ ಮಸೂದೆಗಳನ್ನು ಜೆಡಿಎಸ್ ಪಕ್ಷದವರು ಒಮ್ಮೆ ಬೆಂಬಲಿಸುತ್ತಾರೆ. ಮತ್ತೊಮ್ಮೆ ವಿರೋಧಿಸುತ್ತಿದ್ದಾರೆ. ಬೇರೆಯವರಿಗೆ ಹತ್ತಿರವಾಗಲು ಕಾಂಗ್ರೆಸ್ ಪಕ್ಷವನ್ನು ದೂರುವುದು ಅವರಿಗೆ ಈಗ ಅನಿವಾರ್ಯವಾಗಿದೆ ಎಂದು ಜಾರ್ಜ್ ವ್ಯಂಗ್ಯವಾಡಿದರು.







