ಅಧಿಕಾರದ ರಾಜಾರೋಷ ದುರುಪಯೋಗ: ಕೇಂದ್ರದ ವಿರುದ್ಧ ಬ್ಯಾನರ್ಜಿ ವಾಗ್ದಾಳಿ

ಹೊಸದಿಲ್ಲಿ, ಡಿ.17: ರಾಜ್ಯದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದಲ್ಲಿ ನಿಯೋಜನೆಗಾಗಿ ತಕ್ಷಣ ಬಿಡುಗಡೆಗೊಳಿಸುವಂತೆ ಪ.ಬಂಗಾಳ ಸರಕಾರಕ್ಕೆ ಸೂಚಿಸಿದ್ದ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ)ವು ಬುಧವಾರ ಹೊಸದಾಗಿ ಪತ್ರವೊಂದನ್ನು ಕಳುಹಿಸಿದೆ. ಪ.ಬಂಗಾಳ ಸರಕಾರ ಮತ್ತು ಪೊಲೀಸ್ ಮಹಾ ನಿರ್ದೇಶಕರು ನಿಯಮಗಳನ್ನು ಪಾಲಿಸಲು ವಿಫಲಗೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿರುವ ಎಂಎಚ್‌ಎ,ಐಪಿಎಸ್ ಕೇಡರ್ ನಿಯಮಾವಳಿಗಳ ಕಲಂ 6(1)ರಡಿ ಯಾವುದೇ ವಿವಾದದ ಪ್ರಕರಣದಲ್ಲಿ ಕೇಂದ್ರದ ತೀರ್ಮಾನವು ಅಂತಿಮವಾಗಿರುತ್ತದೆ ಎನ್ನುವುದನ್ನು ಬೆಟ್ಟು ಮಾಡಿದೆ.
ಈ ಪತ್ರಕ್ಕೆ ಕಟುವಾಗಿ ಟೀಕಿಸಿರುವ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ಇದು ಐಪಿಎಸ್ ಕೇಡರ್ ನಿಯಮ 1954ರ ತುರ್ತು ನಿಬಂಧನೆಯ ರಾಜಾರೋಷ ದುರುಪಯೋಗವಾಗಿದೆ ಎಂದು ಬಣ್ಣಿಸಿದ್ದಾರೆ.
ಎಂಎಚ್‌ಎದ ಈ ಕ್ರಮವು ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುವ ಮತ್ತು ಪ.ಬಂಗಾಳದಲ್ಲಿಯ ಐಪಿಎಸ್ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಉಡುಗಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಚುನಾವಣೆಗೆ ಮೊದಲಿನ ಈ ಹೆಜ್ಜೆಯು ಒಕ್ಕೂಟ ಸ್ವರೂಪದ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಇದು ಅಸಾಂವಿಧಾನಿಕವಾಗಿದ್ದು, ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ಪಶ್ಚಿಮ ಬಂಗಾಳವು ವಿಸ್ತರಣಾವಾದಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಮಣಿಯುವುದಿಲ್ಲ ಎಂದು ಬ್ಯಾನರ್ಜಿ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ತನ್ನ ಹಿಂದಿನ ಪತ್ರಕ್ಕೆ ಪ.ಬಂಗಾಳ ಸರಕಾರ ಮತ್ತು ಪೊಲೀಸರು ಸೂಕ್ತವಾಗಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಮೂವರು ಐಪಿಎಸ್ ಅಧಿಕಾರಿಗಳಾದ ಭೋಲಾನಾಥ ಪಾಂಡೆ,ರಾಜೀವ ಮಿಶ್ರಾ ಮತ್ತು ಪ್ರವೀಣ ತ್ರಿಪಾಠಿ ಅವರನ್ನು ಐದು ವರ್ಷಗಳ ಅವಧಿಗೆ ಕೇಂದ್ರ ಸೇವೆಗೆ ನಿಯೋಜಿಸಿದೆ. ಈಗಾಗಲೇ ತಕ್ಷಣದಿಂದ ಜಾರಿಗೆ ಬರುವಂತೆ ಪಾಂಡೆ ಅವರಿಗೆ ಬಿಪಿಆರ್‌ಡಿ ಎಸ್‌ಪಿಯಾಗಿ,ತ್ರಿಪಾಠಿ ಅವರಿಗೆ ಎಸ್‌ಎಸ್‌ಬಿಯ ಡಿಐಜಿಯಾಗಿ ಮತ್ತು ಮಿಶ್ರಾ ಅವರಿಗೆ ಐಟಿಬಿಪಿಯ ಐಜಿಯಾಗಿ ಹೊಣೆಗಾರಿಕೆಗಳನ್ನು ನೀಡಲಾಗಿದೆ.
ಈ ಮೂವರು ಅಧಿಕಾರಿಗಳು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕು,ಇಲ್ಲದಿದ್ದರೆ ಅವರು ಮುಂದಿನ ಕ್ರಮವನ್ನು ಎದುರಿಸಬೇಕಾಗಬಹುದು ಎಂದು ಎಂಎಚ್‌ಎದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು







