ಶಿಕಾರಿಪುರಕ್ಕೆ ತುಂಗಭದ್ರಾ ನದಿ ನೀರು ಹರಿಸುವ ಯೋಜನೆ ಸ್ಥಗಿತಗೊಳಿಸಿ: ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ಡಿ.17: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಿಂದ ಶಿಕಾರಿಪುರಕ್ಕೆ ತುಂಗಭದ್ರಾ ನದಿ ನೀರು ಹರಿಸುವ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಿ, ಯೋಜನೆಗಾಗಿ ರೈತರಿಂದ ವಶಪಡಿಸಿಕೊಂಡಿರುವ ಭೂಮಿಯನ್ನು ಹಿಂದಿರುಗಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಶಿಕಾರಿಪುರ ಮಲೆನಾಡಿಗೆ ಸೇರಿದ್ದಾಗಿದೆ. ಅಂಜನಾಪುರ ಡ್ಯಾಮ್ ಹಾಗೂ ಮದಗ ಮಾಸೂರು ಕೆರೆಗಳನ್ನು ಅಭಿವೃದ್ಧಿಪಡಿಸಿಕೊಂಡಲ್ಲಿ ಎರಡೂ ಜಿಲ್ಲೆಗೆ ಸಾಕಾಗುವಷ್ಟು ನೀರು ದೊರೆಯುತ್ತದೆ. ಈ ರೀತಿಯ ಪರ್ಯಾಯ ಮಾರ್ಗಗಳನ್ನು ಬಳಸುವುದನ್ನು ಬಿಟ್ಟು, ರೈತರ ಜಮೀನುಗಳನ್ನು ಸ್ವಾಧೀನ ಪಡಿಸುವ ಹಠಕ್ಕೆ ಬಿದ್ದಿರುವ ಸರಕಾರ ಹಣವನ್ನು ಪೋಲು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಟ್ಟಿಹಳ್ಳಿ ತಾಲೂಕು ಮತ್ತು ಹಿರೇಕೆರೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ನಾಲ್ಕು ಯೋಜನೆಗಳಿವೆ. ಜತೆಗೆ ಬಹುಗ್ರಾಮ ಕುಡಿಯುವ ಯೋಜನೆಗಳೂ ಇವೆ. ಇವೆಲ್ಲವೂ ಸ್ಥಗಿತಗೊಂಡಿದ್ದು, ಸರಕಾರದ ಮಲತಾಯಿ ಧೋರಣೆಗೆ ಸಾಕ್ಷಿ ಆಗಿದೆ. ಈ ಯೋಜನೆಗಳ ಸ್ಥಗಿತದಿಂದ ಈ ಭಾಗದ ರಟ್ಟಿಹಳ್ಳಿ, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ತಾಲೂಕಿನ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆಯೆಂದು ರೈತರು ಆರೋಪಿಸಿದ್ದಾರೆ. ಇದನ್ನು ಸರಿಪಡಿಸುವ ಕಡಗೆ ಸರಕಾರ ಚಿಂತನೆ ನಡೆಸಲಿಯೆಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ರೈತರು ಈ ಹಿಂದೆಯೇ ತುಂಗಾ ಮೇಲ್ದಂಡೆ ಯೋಜನೆಗೆ ತಮ್ಮ ಜಮೀನನ್ನು ನೀಡಿ ಇವತ್ತಿಗೂ ಪರಿತಪಿಸುತ್ತಿದ್ದಾರೆ. 2000ನೇ ಇಸವಿಯಲ್ಲಿ ಜಮೀನು ಕಳೆದುಕೊಂಡಿರುವ ರೈತರು ಇವತ್ತಿಗೂ ಪೂರ್ಣ ಪ್ರಮಾಣದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈಗ ಮತ್ತೆ ಇನ್ನೊಂದು ಯೋಜನೆ ಹೆಸರಿನಲ್ಲಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಅವರು ತಿಳಿಸಿದ್ದಾರೆ.







