ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ
ಬೆಂಗಳೂರು, ಡಿ.17: ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಪಿಂಜಾರ ಜನಾಂಗದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂದು ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳ ಆಗ್ರಹಿಸಿದೆ.
ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಾಮಂಡಳ ಅಧ್ಯಕ್ಷ ಡಾ.ಅಬ್ದುಲ್ ರಝಾಕ್ ನದಾಫ್, ರಾಜ್ಯ ಸರಕಾರ ಇತ್ತೀಚಿಗೆ ಮರಾಠ ಹಾಗೂ ಬಹುಸಂಖ್ಯಾತರ ವೀರಶೈವ ಲಿಂಗಾಯತ ನಿಗಮಕ್ಕೂ ಹೆಚ್ಚಿನ ಒತ್ತು ನೀಡಿದೆ. ಅದೇರೀತಿ, ಪಿಂಜಾರ ಅಭಿವೃದ್ದಿಗೂ ಸರಕಾರ ಮುಂದಾಗಲಿ ಎಂದರು.
ಕರ್ನಾಟಕದಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆಯ ಅರ್ಧದಷ್ಟು ಪಿಂಜಾರ ನದಾಫ, ಮನ್ಸೂರಿ, ದುದೇಕುಲಾ ಸಮುದಾಯವಿದ್ದು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದ ಅವರು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದ ಈ ಸಮುದಾಯದ ವಾಸ್ತವ ಸ್ಥಿತಿಯನ್ನು ಹಿಂದುಳಿದ ವರ್ಗಗಳ ಆಯೋಗವು 2010ರಲ್ಲಿ ಡಾ.ಸಿ.ಎಸ್.ದ್ವಾರಕಾನಾಥ ಅವರು ಸಲ್ಲಿಸಿದ ವರದಿಯಲ್ಲಿ ತೆರೆದಿಟ್ಟಿದೆ. ಪಿಂಜಾರ, ನದಾಫ್ ಸಮುದಾಯದ ಉಳಿವು ಮತ್ತು ಬೆಳವಣಿಗೆಗೆ ಪಿಂಜಾರ, ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
2009-10ನೇ ಸಾಲಿನಲ್ಲಿ ಡಾ.ಸಿ.ಎಸ್.ದ್ವಾರಕಾನಾಥ ಆಯೋಗವು ಸರಕಾರಕ್ಕೆ ವರದಿಯನ್ನು ಸಲ್ಲಿಸಿ ವರದಿಯಲ್ಲಿ ಅಲೆಮಾರಿ ಪಿಂಜಾರ, ನದಾಫ್ ಜನರ ಉದ್ಯೋಗವು ತೀರ ಕಡಿಮೆಯಾಗಿದ್ದು, ಈ ಸಮುದಾಯವು ತುಂಬಾ ಸಂಕಷ್ಟದಲ್ಲಿದ್ದು, ಅಲೆಮಾರಿ ಸಮುದಾಯಕ್ಕೆ ಹಾಗೂ ಪಿಂಜಾರ ಅಭಿವೃದ್ದಿ ನಿಗಮ ಮಾಡಬೇಕೆಂದು ದ್ವಾರಕಾನಾಥ ಅವರು ಸಲ್ಲಿಸಿದ್ದ ವರದಿ ಆಧರಿಸಿ ಈಗಾಗಲೇ ವಿಶ್ವಕರ್ಮ, ಲಂಬಾಣಿ, ಬೋವಿ, ಉಪ್ಪಾರ ಅಭಿವೃದ್ದಿ ನಿಗಮಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಆದರೆ, ಅಲೆಮಾರಿ ಪಿಂಜಾರ, ನದಾಫ್ ಸಮುದಾಯಕ್ಕೆ ಇದುವರೆಗೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನೆರೆಯ ಆಂಧ್ರ್ರಪ್ರದೇಶ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಪಿಂಜಾರ, ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯ ಮಾಡಿದರು.







