ಗೂಗಲ್-ಫೇಸ್‌ಬುಕ್ ಅಕ್ರಮ ಒಪ್ಪಂದ: ಅಮೆರಿಕದ 10 ರಾಜ್ಯಗಳಿಂದ ಮೊಕದ್ದಮೆ

ವಾಶಿಂಗ್ಟನ್, ಡಿ. 17: ಆನ್‌ಲೈನ್ ಜಾಹೀರಾತಿನ ಅತಿ ದೊಡ್ಡ ಜಾಗತಿಕ ವೇದಿಕೆಗಳಾಗಿರುವ ಫೇಸ್‌ಬುಕ್ ಮತ್ತು ಗೂಗಲ್, ತಮ್ಮ ಮಾರುಕಟ್ಟೆ ಪ್ರಭಾವವನ್ನು ಅಕ್ರಮವಾಗಿ ಬಲಪಡಿಸಿಕೊಳ್ಳಲು ಪರಸ್ಪರ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂದು ಅಮೆರಿಕದ ಟೆಕ್ಸಾಸ್ ಮತ್ತು ಇತರ ಒಂಬತ್ತು ರಾಜ್ಯಗಳು ಗೂಗಲ್ ವಿರುದ್ಧ ಹೂಡಿದ ಮೊಕದ್ದಮೆಯಲ್ಲಿ ಆರೋಪಿಸಿವೆ.
ಗೂಗಲ್ ಮತ್ತು ಫೇಸ್‌ಬುಕ್ ಇಂಟರ್‌ನೆಟ್ ಜಾಹೀರಾತು ಮಾರಾಟದಲ್ಲಿ ಭಾರೀ ಸ್ಪರ್ಧೆಯಲ್ಲಿ ತೊಡಗಿವೆ ಹಾಗೂ ಅವುಗಳು ಒಟ್ಟಿಗೆ ಜಾಗತಿಕ ಮಾರುಕಟ್ಟೆಯ 50 ಶೇಕಡಕ್ಕೂ ಅಧಿಕ ಜಾಹೀರಾತುಗಳನ್ನು ಪಡೆಯುತ್ತಿವೆ. ಈ ಎರಡು ಕಂಪೆನಿಗಳು 2018ರಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಅದರ ಪ್ರಕಾರ ಫೇಸ್‌ಬುಕ್‌ನ ಜಾಹೀರಾತುದಾರರು ಗೂಗಲ್‌ನೊಂದಿಗೆ ಕರಾರು ಹೊಂದಿರುವ ಪ್ರಕಾಶನ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲೂ ತಮ್ಮ ಜಾಹೀರಾತುಗಳನ್ನು ಪ್ರಸಾರಿಸಬಹುದಾಗಿದೆ ಎಂದು ಬುಧವಾರ ಸಲ್ಲಿಸಲಾದ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ 2018ರಲ್ಲಿ ಎರಡು ಕಂಪೆನಿಗಳ ಅತ್ಯುನ್ನತ ವಲಯದ ಅಧಿಕಾರಿಗಳು ಸಹಿ ಹಾಕಿದ್ದಾರೆ. ಆದರೆ, ತಾನು ಫೇಸ್‌ಬುಕ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎನ್ನುವುದನ್ನು ಗೂಗಲ್ ಬಹಿರಂಗವಾಗಿ ಹೇಳಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಗೂಗಲ್‌ನ ಪ್ರತಿಸ್ಪರ್ಧಿ ಕಂಪೆನಿಗಳ ಸಾಫ್ಟ್‌ವೇರನ್ನು ಬಳಸುವುದನ್ನು ನಿಲ್ಲಿಸಲು ಫೇಸ್‌ಬುಕ್ ಒಪ್ಪಿಕೊಂಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಅದು ಅಲ್ಲದೆ, ಗೂಗಲ್‌ನ ಡೇಟಾ ಪಡೆಯುವ ಹಕ್ಕು ಸೇರಿದಂತೆ ವಿವಿಧ ಪ್ರಯೋಜನಗಳು ಹಾಗೂ ಅದರ ಕೆಲವು ನೀತಿಗಳಿಂದ ವಿನಾಯಿತಿಗಳನ್ನು ಫೇಸ್‌ಬುಕ್ ಪಡೆಯುತ್ತಿದೆ ಎಂದು ಆರೋಪಿಸಲಾಗಿದೆ.







