ಪೊಲೀಸ್‌ಗೆ ಹಲ್ಲೆ ಪ್ರಕರಣ : ಓರ್ವ ವಶಕ್ಕೆ
ಮಂಗಳೂರು, ಡಿ.17: ಕರ್ತವ್ಯನಿರತ ಬಂದರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಗಣೇಶ್ ಕಾಮತ್ (43) ಅವರಿಗೆ ಬುಧವಾರ ಮಾರಕಾಸ್ತ್ರ ದಿಂದ ಹಲ್ಲೆಗೈದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ರಥಬೀದಿ ಬಳಿಯ ಚಿತ್ರಮಂದಿರವೊಂದರ ಮುಂಭಾಗದಲ್ಲಿ ಗಣೇಶ್ ಕಾಮತ್ ಹಾಗೂ ಇಬ್ಬರು ಮಹಿಳಾ ಸಿಬಂದಿ ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತರಾಗಿದ್ದರು. ಈ ಸಂದರ್ಭ ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಹಿಂಬದಿ ಸವಾರ ವಾಹನದಿಂದ ಇಳಿದು ಒಂದಷ್ಟು ದೂರ ನಡೆದುಕೊಂಡು ಬಂದು ಹೊಂಚು ಹಾಕಿ ಗಣೇಶ್ ಕಾಮತ್ ಅವರ ಕೈಗೆ ಏಕಾಏಕಿ ಇರಿದಿದ್ದಾನೆ. ತಕ್ಷಣ ಓಡಿ ಹೋಗಿ ಆತನಿಗಾಗಿ ಕಾಯುತ್ತಿದ್ದ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾನೆ ಎಂದು ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸಿಸಿ ಕ್ಯಾಮರಾದಲ್ಲಿ ಸೆರೆ: ಆರೋಪಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಬರುವುದು, ಚೆಕ್‌ಪೋಸ್ಟ್‌ನಿಂದ ಒಂದಷ್ಟು ದೂರದಲ್ಲಿ ನಿಲ್ಲಿಸುವುದು, ಹಿಂಬದಿ ಸವಾರ ಕೃತ್ಯ ಎಸಗಲು ತೆರಳುತ್ತಿರುವುದು, ಕೃತ್ಯ ಎಸಗುವುದು ಬಳಿಕ ಬಂದ ರಸ್ತೆಯಲ್ಲೇ ಹಿಂದಕ್ಕೆ ಹೋಗುತ್ತಿರುವುದು ಇಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.





