ಪರಿಷತ್ ನಲ್ಲಿ ಗದ್ದಲ: ನಾರಾಯಣಸ್ವಾಮಿ, ನಸೀರ್ ಅಹ್ಮದ್, ರಾಥೋಡ್ ವಿರುದ್ಧ ಕ್ರಮಕ್ಕೆ ಆಯನೂರು ಮಂಜುನಾಥ್ ಆಗ್ರಹ

ಬೆಂಗಳೂರು, ಡಿ. 17: ‘ಉಪಸಭಾಪತಿಯವರ ಮೇಲೆ ಎರಗಿ ಕೊರಳಪಟ್ಟಿಗೆ ಕೈಹಾಕಿ ಎಳೆದೊಯ್ದು ಸಚೇತಕ ನಾರಾಯಣಸ್ವಾಮಿ, ನಸೀರ್ ಅಹ್ಮದ್, ಪ್ರಕಾಶ್ ರಾಥೋಡ್ ಮುಂತಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಪತ್ರ ಬರೆದಿದ್ದಾರೆ.
‘ಪೀಠದ ಮೇಲೆ ಕುಳಿತು ಪಾವಿತ್ರ್ಯತೆಗೆ ಧಕ್ಕೆ ತಂದಲ್ಲಿ ಮತ್ತು ಸಂವಿಧಾನಿಕ ಹುದ್ದೆಗಳಾದ ಸಭಾಪತಿ, ಉಪಸಭಾಪತಿ ಮೇಲೆ ಹಲ್ಲೆಯಂತಹ ದುರ್ವರ್ತನೆ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ಇಂದಿನ ಶಾಸಕರಿಗೆ ಮತ್ತು ಮುಂದಿನ ಪೀಳಿಗೆಯ ಶಾಸಕರಿಗೆ ನೀಡಬೇಕು' ಎಂದು ಆಯನೂರು ಮಂಜುನಾಥ್ ಕೋರಿದ್ದಾರೆ.
ಆತ್ಮಾವಲೋಕನ ಮಾಡಿಕೊಳ್ಳಿ: ‘ಸಭಾಪತಿ ಸ್ಥಾನದ ಘನತೆ, ಗೌರವ ಕಾಪಾಡುವುದರ ಬದಲು ನಿಮ್ಮ ಸ್ಥಾನ ಕಾಪಾಡಿಕೊಳ್ಳುವ ಪ್ರಯತ್ನಿಸಿದ್ದು ದುರ್ದೈವದ ಸಂಗತಿ. ಕುರ್ಚಿಗಾಗಿ ಇಷ್ಟೊಂದು ಬದಲಾಗುವ, ಅಪ್ರಾಮಾಣಿಕರಾಗುವ ಅವಶ್ಯಕತೆ ಇತ್ತೇ? ದಯಮಾಡಿ ಆತ್ಮಾವಲೋಕನ ಮಾಡಿಕೊಳ್ಳಿ' ಎಂದು ಆಯನೂರು ಮಂಜುನಾಥ್ ಮನವಿ ಮಾಡಿದ್ದಾರೆ.
ಕರಾಳ ಅಧ್ಯಾಯಕ್ಕೆ ಮುನ್ನಡಿ ಆಗಬಾರದಿತ್ತು: ‘ಡಿ.15ರ ಕಾರ್ಯಕಲಾಪ ಪಟ್ಟಿಯಲ್ಲಿ ಅವಿಶ್ವಾಸ ಸೂಚನೆಯ ವಿಷಯವನ್ನು ಸೇರಿಸಿ, ನೀವು ಪೀಠದಿಂದ ದೂರ ಉಳಿದು ಸತ್ ಸಂಪ್ರದಾಯದ ಮತ್ತೊಂದು ಹೆಜ್ಜೆಯನ್ನಿಡಲು ಸುವರ್ಣಾವಕಾಶ ನಿಮ್ಮ ಪಾಲಿಗಿತ್ತು. ಆದರೆ, ನೀವು ಅದನ್ನು ಕಳೆದುಕೊಂಡು ಬಿಟ್ಟಿರಿ. ಅದಕ್ಕೆ ನೀವು ನೀಡಿದ ಕಾಣಿಕೆ ಕರಾಳ ಅಧ್ಯಾಯಕ್ಕೆ ಬರೆದ ಮುನ್ನುಡಿ ಇದು ನಿಮ್ಮಿಂದ ಆಗಬಾರದಿತ್ತು ಅಲ್ಲದೇ? ಸಭಾಪತಿಗಳೇ?' ಎಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ.
‘ಗೊಂದಲ, ಗದ್ದಲ ಏನೆಲ್ಲ ಅಸಹ್ಯಕರ ಘಟನೆಗಳಿಂದ ಎಲ್ಲರು ತಲೆ ತಗ್ಗಿಸುವಂತಾಯಿತು. ಈ ಗದ್ದಲದ ಮಧ್ಯೆ ಉಪಸಭಾಪತಿಗಳ ಮೇಲೆ ಹಲ್ಲೆ ಹಾಗೂ ಪೀಠದ ಮೇಲೆ ಕೆಲವರು ಕುಳಿತು ಅಪವಿತ್ರಗೊಳಿಸಿದ್ದು ಸಮರ್ಥಿಸಲು ಸಾಧ್ಯವೇ? ಬೇರೆಲ್ಲ ಆವೇಶಭರಿತ ವರ್ತನೆಗಿಂತ ಈ ಎರಡು ಘಟನೆಗಳು ಅಕ್ಷಮ್ಯ. ಮಹಾಪರಾಧ ಎನಿಸುವುದಿಲ್ಲವೇ? ಈ ಪ್ರಕರಣದ ಮೂಲದಲ್ಲಿ ನೀವು ಕಾರಣರಾಗಿದ್ದೀರಿ ನಿಮ್ಮಿಂದ ಇದೆಲ್ಲ ನಡೆಯಲು ಕಾರಣವಾಯಿತು ಎಂದು ನಿಮ್ಮ ಮನಃಸಾಕ್ಷಿ ಹೇಳುತ್ತಿಲ್ಲವೇ? ಈಗಲಾದರೂ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಥಾನವನ್ನು ತೆರವು ಮಾಡುವುದು ಉಚಿತ' ಎಂದು ಆಯನೂರು ಮಂಜುನಾಥ್ ಪತ್ರದಲ್ಲಿ ಕೋರಿದ್ದಾರೆ.







