ಕ್ರಿಸ್ಮಸ್- ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ. 17: ಕೋವಿಡ್-19 ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚರ್ಚ್ ಗಳಲ್ಲಿ ಹಾಗೂ ಹೊಟೇಲ್, ಮಾಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸರಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕ್ರೈಸ್ತ ಧರ್ಮದ ಚರ್ಚ್ ಗಳಲ್ಲಿ ಒಂದೇ ಬಾರಿಗೆ ಹೆಚ್ಚು ಜನ ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಆಯೋಜಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಹಬ್ಬದ ಸಂದರ್ಭದಲ್ಲಿ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಲಾಗಿದೆ. ಡಿ.30 ರಿಂದ ಜ.2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚು ಜನರು ಸೇರುವ, ವಿಶೇಷ ಕಾರ್ಯಕ್ರಮಗಳು ಆಯೋಜಿಸುವ, ಪಾರ್ಟಿ ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ದೈಹಿಕ ಅಂತವಿಲ್ಲದೇ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ. ಸರಕಾರದ ಮಾರ್ಗಸೂಚಿಯಂತೆ ಹಿರಿಯರು, ಮಕ್ಕಳು ಮನೆಯಲ್ಲಿಯೇ ಇರಬೇಕು ಹಾಗೂ ಕ್ಲಬ್, ಮಾಲ್, ರೆಸ್ಟೋರೆಂಟ್ ಹಾಗೂ ಹೊಟೇಲ್ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಕಡ್ಡಾಯವಾಗಿ ಮಾಡಬೇಕು ಹಾಗೂ ಜನರು ಹೆಚ್ಚು ಸೇರದಂತೆ ಜಾಗೃತಿ ವಹಿಸಬೇಕು. ಪ್ರಾಂಗಣ, ವ್ಯವಸ್ಥಿತ ಕಟ್ಟಡ ಸಮುಚ್ಛಯದಲ್ಲಿ ಕಡ್ಡಾಯವಾಗಿ ದೈಹಿಕ ಅಂತರವನ್ನು ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ, ಕಾರ್ಪೋರೇಷನ್, ಪ್ರಾಧಿಕಾರಗಳಿಂದ ಹೊರಡಿಸಿದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಅಥವಾ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಪ್ರಕಟನೆಯಲ್ಲಿ ಹೇಳಿದ್ದಾರೆ.







