ಸಿಗಂದೂರು ದೇವಾಲಯ ಅರಣ್ಯ ಭೂಮಿ ಒತ್ತುವರಿ ಆರೋಪ: ವರದಿ ಸಲ್ಲಿಸಲು ಡಿಸಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಡಿ.17: ಶಿವಮೊಗ್ಗ ಜಿಲ್ಲೆಯ ಸಿಗಂದೂರು ಚೌಡೇಶ್ವರಿ ದೇವಾಲಯದ ಹೆಸರಿನಲ್ಲಿ ಅರಣ್ಯಭೂಮಿ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಹೈಕೋರ್ಟ್ ಗಡುವು ನೀಡಿದೆ.
ಈ ಕುರಿತು ಸಾಗರ ತಾಲೂಕಿನ ಕೆ.ಎಸ್.ಲಕ್ಷ್ಮೀನಾರಾಯಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರು ಆರೋಪಿಸಿರುವಂತೆ ಅರಣ್ಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಲಾಗಿದೆಯೇ ಎಂದು ಸರಕಾರಿ ಪರ ವಕೀಲರನ್ನು ನ್ಯಾಯಪೀಠವು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲರು ನಿಲ್ಲಿಸಲಾಗಿದೆ ಎಂದರು. ಅರ್ಜಿದಾರರ ಪರ ವಕೀಲ ಪಿಪಿ ಹೆಗ್ಡೆ ಮಾಹಿತಿ ನೀಡಿ, ಈ ಹಿಂದೆ ತಿಳಿದಂತೆ ಕಾಮಗಾರಿ ನಿಂತಿದೆ ಎಂದು ಕೇಳಿದ್ದೆ. ಈಗ ಗೊತ್ತಿಲ್ಲ ಎಂದರು. ಮಧ್ಯಪ್ರವೇಶಿಸಿದ ಪೀಠ, ಕಾಮಗಾರಿ ನಿಲ್ಲಿಸಲಾಗಿದೆಯೇ ಎಂಬುದನ್ನು ಫೋಟೋ ಸಹಿತ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಿತು. ಅಲ್ಲದೇ, ಈ ಹಿಂದೆ ನ್ಯಾಯಾಲಯ ನೀಡಿರುವ ಆದೇಶದಂತೆ, ಸ್ಥಳದ ಸರ್ವೇ ನಡೆಸಿ ಸರಕಾರಿ ಭೂಮಿ ಒತ್ತುವರಿ ಮಾಡಲಾಗಿದೆಯೇ ಎಂಬುದರ ಕುರಿತು ಮುಂದಿನ 3 ವಾರಗಳಲ್ಲಿ ಜಿಲ್ಲಾಧಿಕಾರಿ ವರದಿ ನೀಡಬೇಕು. ಮತ್ತಷ್ಟು ಕಾಲಾವಕಾಶ ನೀಡಲಾಗುವುದಿಲ್ಲ ಎಂದು ಸೂಚಿಸಿ, ವಿಚಾರಣೆಯನ್ನು ಜ.21ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಸವಳ್ಳಿ ಗ್ರಾಮದ ಸರ್ವೇ ನಂಬರ್ 65ರಲ್ಲಿನ ಸರಕಾರಿ ಅರಣ್ಯಭೂಮಿಯನ್ನು ದೇವಸ್ಥಾನದ ಹೆಸರಿನಲ್ಲಿ ಒತ್ತುವರಿ ಮಾಡಲಾಗಿದೆ. ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವು ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ದೇವಾಲಯದ ಹೆಸರಿನಲ್ಲಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿದ್ದು, ವಾರ್ಷಿಕ ಐದು ಕೋಟಿ ರೂ. ಮಾತ್ರ ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿರುವ ಅರ್ಜಿದಾರರು, ಒತ್ತುವರಿಯಾಗಿರುವ ಅರಣ್ಯಭೂಮಿಯನ್ನು ತೆರವುಗೊಳಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಹಾಗೂ ದೇವಸ್ಥಾನದ ಆಡಳಿತವನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳುವಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.







