Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಿಮ್ ಕಿ ಡುಕ್: ಎಣ್ಣೆ ತೀರಿದ ಏಶ್ಯದ...

ಕಿಮ್ ಕಿ ಡುಕ್: ಎಣ್ಣೆ ತೀರಿದ ಏಶ್ಯದ ವಿಕ್ಷಿಪ್ತ ಹಣತೆ

ನೆಲ್ಲುಕುಂಟೆ ವೆಂಕಟೇಶ್ನೆಲ್ಲುಕುಂಟೆ ವೆಂಕಟೇಶ್18 Dec 2020 12:10 AM IST
share
ಕಿಮ್ ಕಿ ಡುಕ್: ಎಣ್ಣೆ ತೀರಿದ ಏಶ್ಯದ ವಿಕ್ಷಿಪ್ತ ಹಣತೆ

ಅತ್ಯುತ್ತಮ ಕಲಾಕೃತಿಯೊಂದು ಸದಾ ತನ್ನನ್ನು ಬಂಧಿಸುವ ಫಾರ್ಮ್ ಅನ್ನು ಮುರಿಯಲು ಪ್ರಯತ್ನಿಸುತ್ತಿರುತ್ತದೆ. ಸಿನೆಮಾ, ಪೈಂಟಿಂಗ್, ಕತೆ, ಪದ್ಯ, ಕಾದಂಬರಿ, ನಾಟಕ ಎಲ್ಲವೂ ಹಾಗೆಯೇ. ಫಾರ್ಮಿನ ಬಂಧನದಿಂದ ಬಿಡಿಸಿಕೊಳ್ಳದೆ ಇದ್ದರೆ ಅಂತಹ ಕಲಾಕೃತಿ ಕೃತಕ ಅನ್ನಿಸಲಾರಂಭಿಸುತ್ತದೆ. ಕಾಲ, ದೇಶಗಳ ಹಂಗು ಮೀರಿ ಕತೆ, ಕಲಾಕೃತಿಯು ಮನುಷ್ಯರೆಲ್ಲರ ಸಂಕಟ, ತೊಳಲಾಟ ಅನ್ನಿಸತೊಡಗಿದರೆ ಮಾತ್ರ ಬದುಕಿನ ಕತೆಯಾಗುತ್ತದೆ. ಕಿಮ್‌ನ ಸಿನೆಮಾಗಳು ಅಂತಹ ದಿಗಂತದ ಕಡೆಗೆ ಏರಲು ಯತ್ನಿಸುತ್ತವೆ.


ದಕ್ಷಿಣ ಕೊರಿಯದ ನಿರ್ದೇಶಕ ‘ಕಿಮ್ ಕಿ ಡುಕ್’ ಲಾಟ್ವಿಯಾದ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದ. ಕೊರೋನ ಸೋಂಕು ಈತನನ್ನು ತಿಂದು ಹಾಕಿದೆ. ಕಿಮ್ ಸಾವು ಜಗತ್ತಿನ ಗಂಭೀರ ಸಿನೆಮಾಸಕ್ತರನ್ನು ಕಾಡಿದಂತೆ ನಮ್ಮನ್ನು ಕಾಡಲಿಲ್ಲ. ಕಡೇ ಪಕ್ಷ ಕೇರಳವನ್ನು ಕಾಡಿದಷ್ಟೂ ಕಾಡಲಿಲ್ಲ. ಕೇರಳ ಮನೆ ಮಗನನ್ನು ಕಳೆದುಕೊಂಡ ಹಾಗೆ ಸ್ಪಂದಿಸಿದೆ. ಮಲಯಾಳಂಗೆ ಆತನ ಬಹುಪಾಲು ಸಿನೆಮಾಗಳು ಡಬ್ ಆಗಿವೆ. ಅಲ್ಲಿ ಅವನ ಸಿನೆಮಾ ಉತ್ಸವಗಳೂ ನಡೆದಿವೆ. ಅವನ ಸಾವಿನ ಕುರಿತು ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ತುಸು ಸದ್ದು ಮಾಡಿದ್ದು ಬಿಟ್ಟರೆ ಹೆಚ್ಚೇನೂ ಚರ್ಚೆಯಾಗಲಿಲ್ಲ. ಎಂದಿನಂತೆ ಕರ್ನಾಟಕದ ಸಿನೆಮಾ ಜನ ತಣ್ಣಗೆ ಪ್ರತಿಕ್ರಿಯಿಸಿದರು. ಬಹಳ ಜನ ಕನ್ನಡ ಸಿನೆಮಾದವರಿಗೆ ಈತ ಗೊತ್ತಿದ್ದನೋ ಇಲ್ಲವೋ ತಿಳಿಯದು. ಕನ್ನಡ ಬಾಲಿವುಡ್‌ನ್ನು ಮಾದರಿಯಾಗಿಟ್ಟುಕೊಂಡು ಸಿನೆಮಾ ಮಾಡಲು ಪ್ರಯತ್ನಿಸುತ್ತಿದೆ.

ಮಲೆಯಾಳಂಗೆ ಇರುವ ಡಯಸ್ಪೋರಾ ಗುಣದಿಂದಾಗಿ ಅವರನ್ನು ಜಗದ ಜತೆ ಸಂವಾದ ಮಾಡುವ ಮಾಂತ್ರಿಕರನ್ನಾಗಿಸಿದೆ. ಮಲೆಯಾಳಿಗರು ಮನುಷ್ಯನ ಆಳದ ಇಂಪಲ್ಸಿವ್ ಗುಣಗಳನ್ನು ಹಿಡಿದು ಯೂನಿವರ್ಸಲ್ ಆಗಬಹುದಾದ ಸಿನೆಮಾಗಳನ್ನು ಕಟ್ಟುತ್ತಿದ್ದಾರೆ. ಕನ್ನಡಕ್ಕೆ ಇದು ಯಾಕೊ ಸಾಧ್ಯವಾಗಿಲ್ಲ. ನಮ್ಮಲ್ಲಿ ಯೂನಿಫಾರ್ಮಿಟಿಯ ಫ್ರೇಮಿನಲ್ಲಿಟ್ಟ ಪ್ರೇಮ, ಜೋಕುಗಳು, ಅಂತರಂಗವೇ ಇಲ್ಲದಂತೆ ಕಾಣುವ ಇಟ್ಟಿಗೆ, ಜಲ್ಲಿಯಂತಹ ವಿಲನ್‌ಗಳು, ಅವರ ರಕ್ತಪಾತಗಳು ಇವುಗಳನ್ನು ಪದೇ ಪದೇ ತಿರುಗಿಸಿ ಸೂಕ್ಷ್ಮತೆಯುಳ್ಳವರನ್ನು ಸಿನೆಮಾಗಳತ್ತ ನೋಡದ ಹಾಗೆ ಮಾಡಲಾಗಿದೆ. ಹಿಂಸೆಯಲ್ಲಿ ರಣ ಹಿಂಸೆ ತೋರಿಸುವ ಸಿನೆಮಾ ದುಡ್ಡು ಮಾಡುತ್ತದೆ ಎಂಬ ಸೂತ್ರವೇನೋ ಇವರಿಗೆ ಸಿಕ್ಕಿಬಿಟ್ಟಂತಿದೆ. ಇದು ನೋಡುಗರ ಸಮಸ್ಯೆಯೋ ಇಲ್ಲ ಸಿನೆಮಾ ಮಾಡುವವರ ಸಮಸ್ಯೆಯೋ ತಿಳಿಯದು. ಇಬ್ಬರೂ ಒಬ್ಬರತ್ತ ಒಬ್ಬರು ಮಾತ್ರ ಕೈ ತೋರಿಸಿಕೊಂಡು ಕೂತಿದ್ದಾರೆ. ಇದೆಲ್ಲದರ ನಡುವೆ ಕನ್ನಡ ತೆಳುವಾಗುತ್ತಿದೆ. ಆಧುನಿಕ ಸಂದರ್ಭದಲ್ಲಿ ಆಹಾರ ಸಂಸ್ಕೃತಿ, ಸಿನೆಮಾ, ಸಂಗೀತ ಸಂಸ್ಕೃತಿಗಳು ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ವಿಸ್ತರಿಸಲು ಕಾರಣವಾಗುತ್ತಿವೆ. ನಾವು ಇದನ್ನು ಮರೆತಂತೆ ವರ್ತಿಸುತ್ತಿದ್ದೇವೆ.

ಕನ್ನಡದ ಕಲಾತ್ಮಕ ಸಿನೆಮಾಗಳೂ ಸಹ ನನ್ನನ್ನು ಕಾಡಿದ್ದಿಲ್ಲ. ಅವು ಡಾಕ್ಯುಮೆಂಟರಿ ಲೆವೆಲ್‌ನಿಂದ ಮೇಲೆದ್ದ ಹಾಗೆ ಕಂಡೇ ಇಲ್ಲ. ಇಷ್ಟಕ್ಕೂ ಸಿನೆಮಾವನ್ನು ಕಲಾತ್ಮಕ, ಕಮರ್ಷಿಯಲ್ ಎಂದು ವಿಂಗಡಿಸುವುದೇ ತಪ್ಪಲ್ಲವೇ? ಕಲಾತ್ಮಕ ಸಿನೆಮಾ ಒಂದನ್ನು ಜನ ನೋಡದಿದ್ದರೆ, ತಿಂದ ಬಂಡವಾಳವನ್ನು ಅದು ವಾಪಸ್ ನೀಡದಿದ್ದರೆ ಅಂತಹ ಸಿನೆಮಾವನ್ನು ಯಾಕೆ ಮಾಡಬೇಕು? ಕಮರ್ಷಿಯಲ್ ಚಿತ್ರಕ್ಕೆ ಕಲೆಯ ಸ್ಪರ್ಶವೇ ಇಲ್ಲದಿದ್ದರೆ ಅದೂ ಸಹ ಹುಸಿಯಾದ ರಚನೆಯೇ ಅಲ್ಲವೇ? ಒಳ್ಳೆಯತನ ಮತ್ತು ಕೆಟ್ಟತನಗಳನ್ನು ಸರಳ ರೇಖೆಗಳಲ್ಲಿ ಇರಿಸಿ ನೋಡುವ ಚಾಳಿಯೊಂದು ಕನ್ನಡವನ್ನು ಆವರಿಸಿಕೊಂಡು ಕೂತಿದೆ. ನಾಯಕನಾದವನು ಹೀಗೆ ಇರಬೇಕು ಎಂಬ ಫಾರ್ಮುಲಾವನ್ನು ಅಚ್ಚುಕಟ್ಟಾಗಿ ಪಾಲಿಸಲಾಗುತ್ತದೆ. ರಾಮನೊಳಗೂ, ಕೃಷ್ಣನೊಳಗೂ ಅಸಂಖ್ಯಾತ ಓರೆ ಕೋರೆಗಳಿದ್ದವು ಎಂದು ವ್ಯಾಸ, ವಾಲ್ಮೀಕಿಯರು ತೋರಿಸುತ್ತಾರೆ. ಮನುಷ್ಯನಾಗುವುದೆಂದರೆ ಮೃಗೀಯತೆಯಿಂದ ಬಿಡುಗಡೆ ಪಡೆಯುವುದೆಂದು ಅರ್ಥ. ತಂದೆ ಆ ಮೃಗತ್ವದಿಂದ ಬಿಡುಗಡೆ ಪಡೆದಿದ್ದ ಎಂದರೆ ಮಗನಿಗೆ ಮನುಷ್ಯತ್ವ ಬಂದು ಬಿಡುತ್ತದೆ ಎಂದಲ್ಲ. ಮಗನೂ ಸಂಘಷರ್ ಮಾಡಿಯೇ ಬದುಕಬೇಕು. ಈ ತಾಕಲಾಟಗಳೇ ಮನಃಶಾಸ್ತ್ರದ ಮೂಲ ತಾಕುಗಳು. ಬುಡಕಟ್ಟು, ನಾಗರಿಕತೆ, ರಾಷ್ಟ್ರಗಳಿಗೂ ಇಂಪಲ್ಸಿವ್ ಕ್ಯಾರೆಕ್ಟರ್ ಇರುತ್ತದೆ. ಪ್ರೇಮ, ಕಾಮ, ಧರ್ಮದ ಸ್ಥಗಿತ ಮೌಲ್ಯಗಳು, ಜಾತಿ, ವರ್ಗಗಳ ದಮನಕಾರಿ ಗುಣಗಳು ರಾಷ್ಟ್ರದ ಶ್ರೇಷ್ಠತೆಯ ಸಮಸ್ಯೆಗಳು. ಹಿಂಸೆ, ಶಾಂತಿ ಕುರಿತಾದ ಹಂಬಲ, ಪ್ರೀತಿ ಕುರಿತ ದಾಹ ಇವೆಲ್ಲ ಮನುಷ್ಯರನ್ನು ನಿರಂತರ ಕಾಡುತ್ತಲೇ ಇವೆ. ಕಂಗೆಡಿಸುತ್ತಲೇ ಇವೆ. ನಾಯಕನೊಳಗೊಳಗೊಬ್ಬ ಖಳ. ಖಳನೊಳಗೊಬ್ಬ ಮನುಷ್ಯನಿರಲು ಸಾಧ್ಯ ಎಂದು ಪಂಪ ರನ್ನರ ಕಾಲದಲ್ಲೇ ಕನ್ನಡವು ಚಿಂತಿಸಿದೆ.

ಕನ್ನಡದ ಸಿನೆಮಾಗಳು ನಡುಗಿಸುವಂತಹ, ಮುಟ್ಟಿ ನೋಡಿಕೊಳ್ಳುವಂತಹ, ಕಾಡುವಂತಹ ಇಂಪಲ್ಸಿವ್ ಕ್ಯಾರೆಕ್ಟರ್‌ಗಳನ್ನು ಸೃಷ್ಟಿಸಿದೆಯೇ? ಎಂಬುದನ್ನು ಕೇಳಿಕೊಳ್ಳಲು ಸಕಾಲ ಇದು. ಪಕ್ಕದ ಮಲಯಾಳಂ ಸಿನೆಮಾಗಳ ಮೂಲಕ ವಿಶ್ವಸ್ಥ ವ್ಯಾಕರಣವನ್ನು ಹಿಡಿದು, ಸ್ಥಳೀಯ ರಂಗು ಬಳಿದುಕೊಂಡು ನರ್ತಿಸುತ್ತಿದೆ. ತಮಿಳಿನಲ್ಲೂ ಪ್ರಧಾನ ಧಾರೆಯ ದೃಷ್ಟಿಕೋನವನ್ನು ಭಂಗಿಸುವ ಸಿನೆಮಾಗಳು ಆಗಾಗ ಬರುತ್ತಿವೆ. ಕನ್ನಡ ಸಿನೆಮಾಗಳ ಪ್ರಗತಿಪರತೆ ಜಾತಿ, ಧರ್ಮ ಮೀರಿ ಪ್ರೀತಿ ಮಾಡುವುದು, ಪಾಠ ಮಾಡುವ ಮೇಷ್ಟ್ರುಗಳನ್ನು ಜೋಕರುಗಳಾಗಿ ಚಿತ್ರಿಸುವುದು, ಆಡಳಿತಶಾಹಿಯನ್ನು ಕೆಟ್ಟದಾಗಿ ಬಯ್ಯುವುದು, ಬಡವನೊಬ್ಬ ವೇಗವಾಗಿ ಶ್ರೀಮಂತನಾಗುವುದು, ರೌಡಿಯಾದರೂ ಒಳ್ಳೆಯ ಕಾರಣಕ್ಕೆ ಇತರರನ್ನು ಕೊಲ್ಲುವುದು ಮುಂತಾದ ಕತೆಗಳಾಚೆಗೆ ಹೋಗಿದ್ದು ಬಹಳ ಕಡಿಮೆ. ವಾಸ್ತವವಲ್ಲದ ಹುಸಿಯ ಬಣ್ಣವನ್ನು ಜನರ ಮೆದುಳ ಮೇಲೆ ತೇಲಿಸಲಾಗುತ್ತಿದೆ.

ಕಿಮ್ ಕಿ ಡುಕ್ ಸಾವು ಇದನ್ನೆಲ್ಲ ನೆನಪಿಸಿತು. ಕಿಮ್ ವಿಪರೀತ ವಿಕ್ಷಿಪ್ತ ಮನಸ್ಸಿನ ಮನುಷ್ಯ. ದಕ್ಷಿಣ ಕೊರಿಯದ ಗ್ಯೊಂಗ್ ಸ್ಯಾಂಗ್ ಪ್ರದೇಶದಲ್ಲಿ ಹುಟ್ಟಿ ಸಿಯೋಲ್‌ನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿದ. ಅಲ್ಲಿಂದ ಪ್ಯಾರಿಸ್‌ಗೆ ಹೋಗಿ ಬೀದಿಗಳಲ್ಲಿ ಪೈಂಟಿಂಗ್ ಮಾಡುತ್ತಾ ಅಲ್ಲಿನ ಕಲೆಯ ಅಭಿವ್ಯಕ್ತಿ ವಿಧಾನಗಳನ್ನು ಆಳವಾಗಿ ಗಮನಿಸತೊಡಗಿದ. ನಿಧಾನಕ್ಕೆ ಸಿನೆಮಾ ಕಡೆಗೆ ನಡೆದ. 1996 ರಲ್ಲಿ ಕ್ರೊಕೋಡೈಲ್ ಸಿನೆಮಾ ಮಾಡಿದ. ಬುದ್ಧಿಸ್ಟ್ ದೇಶವಾದ ದಕ್ಷಿಣ ಕೊರಿಯದಲ್ಲಿ ಈತನ ಸಿನೆಮಾಗಳ ಬೆಚ್ಚಿ ಬೀಳಿಸುವ ಗುಣ, ಅತಿ ಎನ್ನಿಸುವ ಒರಟುತನ, ಹಸಿ ಹಸಿಯಾದ ಮನುಷ್ಯರ ವಾಂಛೆಗಳು ಮೀಡಿಯಾಗಳ, ಪಂಡಿತರ ಗಮನ ಸೆಳೆಯಲಿಲ್ಲ. ಸಿಟ್ಟಿಗೆದ್ದ ಕಿಮ್ ತನ್ನ ದೇಶದಲ್ಲಿ ಸಿನೆಮಾ ಬಿಡುಗಡೆ ಮಾಡುವುದಿಲ್ಲವೆಂದು ಹಠ ಮಾಡಿದ. ಕಿಮ್‌ನ ಸಿನೆಮಾ ‘ದ ನೆಟ್’ಅನ್ನು ನಾನು 2017 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ನೋಡಿದೆ.

ಆ ಸಿನೆಮಾ ವಿಶ್ವಾತ್ಮಕವಾದವನ್ನು ಪ್ರತಿಪಾದಿಸುತ್ತಿದ್ದ ಜಗತ್ತಿನ ಅನೇಕ ಚಿಂತಕರನ್ನು ನೆನಪಿಸಿತು. ಮನುಷ್ಯನ ಒಳ್ಳೆಯದಕ್ಕೆಂದು ನಿರ್ಮಾಣವಾದ ರಾಷ್ಟ್ರವೆಂಬ ಆಧುನಿಕ ರಾಜಕೀಯ ಸಂರಚನೆಯು ಭೀತಿಕಾರಕ ಮತ್ತು ಹಿಂಸ್ರಕವೆಂದು ಆ ಸಿನೆಮಾ ವಿವರಿಸುತ್ತದೆ. ನೆಟ್ ಸಿನೆಮಾ ನೋಡಿದ ನಂತರ ಅವನ ಉಳಿದ ಸಿನೆಮಾಗಳನ್ನು ಹುಡುಕಿ ಹುಡುಕಿ ನೋಡತೋಡಗಿದೆ. ಕೆಲವು ಸಿನೆಮಾಗಳು ವಿಕ್ಷಿಪ್ತ ಅನ್ನಿಸಿದರೆ ಕೆಲವು ಮನುಷ್ಯನ ನಾಭಿಯಾಳದ ಸಂಕಟದಿಂದ ಎದ್ದು ಬರುತ್ತಿವೆ ಅನ್ನಿಸಿದವು. ನನ್ನನ್ನು ಬಹಳ ಕಾಡಿದ ಸಿನೆಮಾಗಳು ಮೂರು; ದ ನೆಟ್, 3 ಐರನ್ ಮತ್ತು ಸ್ಪ್ರಿಂಗ್, ಸಮ್ಮರ್, ಫಾಲ್ ವಿಂಟರ್ ಅಂಡ್ ಸ್ಪ್ರಿಂಗ್. ಸಿನೆಮಾ ನೋಡಿ ಬಹಳ ಕಾಲವಾದರೂ ಅದರ ಗುಂಗಿನಿಂದ ಹೊರಬರಲಾಗದಂತೆ ಈ ಸಿನೆಮಾಗಳು ಕಾಡುತ್ತಿವೆ. ಅತ್ಯುತ್ತಮ ಕಲಾಕೃತಿಯೊಂದು ಸದಾ ತನ್ನನ್ನು ಬಂಧಿಸುವ ಫಾರ್ಮ್ ಅನ್ನು ಮುರಿಯಲು ಪ್ರಯತ್ನಿಸುತ್ತಿರುತ್ತದೆ. ಸಿನೆಮಾ, ಪೈಂಟಿಂಗ್, ಕತೆ, ಪದ್ಯ, ಕಾದಂಬರಿ, ನಾಟಕ ಎಲ್ಲವೂ ಹಾಗೆಯೇ. ಫಾರ್ಮಿನ ಬಂಧನದಿಂದ ಬಿಡಿಸಿಕೊಳ್ಳದೆ ಇದ್ದರೆ ಅಂತಹ ಕಲಾಕೃತಿ ಕೃತಕ ಅನ್ನಿಸಲಾರಂಭಿಸುತ್ತದೆ. ಕಾಲ, ದೇಶಗಳ ಹಂಗು ಮೀರಿ ಕತೆ, ಕಲಾಕೃತಿಯು ಮನುಷ್ಯರೆಲ್ಲರ ಸಂಕಟ, ತೊಳಲಾಟ ಅನ್ನಿಸತೊಡಗಿದರೆ ಮಾತ್ರ ಬದುಕಿನ ಕತೆಯಾಗುತ್ತದೆ. ಕಿಮ್‌ನ ಸಿನೆಮಾಗಳು ಅಂತಹ ದಿಗಂತದ ಕಡೆಗೆ ಏರಲು ಯತ್ನಿಸುತ್ತವೆ.

ಕುರ ಸೋವಾನ ನಂತರ ಪಶ್ಚಿಮದ ಜಗತ್ತು ಏಶ್ಯದ ಕಡೆಗೆ ತಿರುಗಿ ನೋಡಿದ್ದು ಒಂದರ್ಥದಲ್ಲಿ ಕಿಮ್ ಕಿ ಡುಕ್ ಕಾರಣದಿಂದಾಗಿ. ಇರಾನಿನ ಮಜೀದ್ ಮಜೀದಿಯೂ ಈ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾನೆ. ಕಿಮ್ ಗಿಂತ ಒಂದು ವರ್ಷ ದೊಡ್ಡವನಾದ ಮಜೀದಿ ಮಕ್ಕಳ ಮೂಲಕ ಮನುಷ್ಯರ ಸಂಕಟಗಳನ್ನು ಹೇಳಲು ಪ್ರಯತ್ನಿಸುತ್ತಾನೆ. ಮಜೀದಿಯ ‘ಚಿಲ್ಡ್ರನ್ ಆಫ್ ಹೆವನ್’, ‘ದ ಕಲರ್ ಆಫ್ ಪ್ಯಾರಡೈಸ್’ ಗಮನಾರ್ಹ ಕಲಾಕೃತಿಗಳು. ಸಿನೆಮಾಗಳ ಮೂಲಕ ಮಜೀದಿ ಇರಾನಿನ ಗ್ರಾಮೀಣ ಕೃಷಿ ಕುಟುಂಬಗಳ ಕಣ್ಣೀರು, ಸಂಕಟ, ಪ್ರೇಮ ಮತ್ತು ಮನುಷ್ಯರ ನವಿರುತನಗಳನ್ನು ಹೆಕ್ಕಿ ತರಲು ಪ್ರಯತ್ನಿಸುತ್ತಾನೆ. ಮಕ್ಕಳನ್ನು ದೇವರ ಪ್ರತಿನಿಧಿಗಳೆಂದು ಗ್ರಹಿಸುತ್ತಾನೆ.

ಕಿಮ್ ಮಜೀದಿಯ ಹಾಗೆ ಬೇಗ ಆರ್ದ್ರಗೊಳ್ಳುವ ಮನುಷ್ಯನಲ್ಲ. ಆತ ಒಂದರ್ಥದಲ್ಲಿ ದೇವರ ವಿರುದ್ಧವೇ ದಂಗೆ ಏಳುವ ಮನುಷ್ಯ. ಅವನ ಸ್ಪ್ರಿಂಗ್ ಸಮ್ಮರ್... ಸಿನೆಮಾ ಒಂದರ್ಥದಲ್ಲಿ ಬುದ್ಧನ ವಿರುದ್ಧ ದಂಗೆ ಏಳುವ ಸಿನೆಮಾ. ಮಹಾಯನಿ ಬೌದ್ಧಗುರು ಮತ್ತು ಶಿಷ್ಯನ ನಡುವೆ ನಡೆವ ಈ ಕತೆ ಚಕ್ರ ಗತಿ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಮುಖ್ಯವಾಗಿ ಅದು ಎರಡು ತತ್ವಗಳನ್ನು ಪ್ರತಿಪಾದಿಸುತ್ತದೆ.

ಒಂದು, ‘‘ಕಾಮವು ತನ್ನ ತೀರದ ದಾಹದಿಂದ ಇನ್ನೊಂದು ಜೀವದ ಮೇಲೆ ಪೊಸೆಸಿವ್ ಆಗುತ್ತದೆ, ಕಡೆಗೆ ಕೊಲೆ ಮಾಡಲು ಉತ್ತೇಜಿಸುತ್ತದೆ’’. ಗುರು, ಶಿಷ್ಯರು ಪ್ರಕೃತಿಯ ಏರಿಳಿತಗಳನ್ನು ನೋಡುತ್ತಾ ಸರೋವರದ ಮಧ್ಯದ ಕುಟೀರದಲ್ಲಿ ಬದುಕಿದ್ದ ನೆಲೆಗೆ ಖಿನ್ನ ಮನಸ್ಸಿನ ಕಾಯಿಲೆ ಅಂಟಿದ್ದ ಹುಡುಗಿಯೊಬ್ಬಳು ಬರುತ್ತಾಳೆ. ಶಿಷ್ಯ ಅವಳ ಮೋಹಕ್ಕೆ ಬಿದ್ದು ಅವಳೊಂದಿಗೆ ಮಲಗುತ್ತಾನೆ. ಗುರುವಿಗೆ ಗೊತ್ತಾಗುತ್ತದೆ. ಇದು ಪುನರಾವರ್ತನೆಯಾಗುತ್ತದೆ. ಆಗ ಗುರು ಮೇಲಿನ ಮಾತನ್ನು ಶಿಷ್ಯನಿಗೆ ಹೇಳುತ್ತಾನೆ. ಗಂಡಿನ ಸ್ಪರ್ಶದಿಂದ ಹುಡುಗಿ ಗುಣಮುಖಳಾಗುತ್ತಾಳೆ. ದೈಹಿಕ ಸಂಪರ್ಕದಿಂದ ಕಾಯಿಲೆ ವಾಸಿಯಾಗುವುದಾದರೆ ಅದು ಒಮ್ಮೆ ಸಾಕು ಎನ್ನುವಷ್ಟು ಪ್ರಾಕ್ಟಿಕಲ್ ಆಗಿ ಗುರು ಯೋಚಿಸುತ್ತಾನೆ. ಆದರೆ ಅದೇ ಕಾಯಿಲೆಯಾಗಿಬಿಟ್ಟರೆ ನಾಶ ಖಂಡಿತ ಎನ್ನುವುದು ಆತನ ನಿಲುವು. ಹುಡುಗಿಯನ್ನು ಹೊರಡುವಂತೆ ಹೇಳುತ್ತಾನೆ. ಅವಳು ಹೋದ ಕೂಡಲೇ ಶಿಷ್ಯ ಭೋರೆಂದು ಗೋಳಾಡಿ ಅವಳ ಹಿಂದೆ ಹೋಗುತ್ತಾನೆ. ಕಡೆಗೊಂದು ದಿನ ವಾಪಸು ಬರುತ್ತಾನೆ. ಪಶ್ಚಾತ್ತಾಪ, ಸಿಟ್ಟಿನಲ್ಲಿ ಭುಗಿಲೆದ್ದು ಹೇಳುತ್ತಾನೆ. ‘ಅವಳಿಂದ ಬಯಸಿದ್ದು ಪ್ರೇಮವನ್ನು ಮಾತ್ರ. ಅವಳು ಬೇರೊಬ್ಬನೊಂದಿಗೆ ಹೊರಟು ಹೋದಳು. ಕಡೆಗೆ, ಅವಳನ್ನು ಕೊಂದು ಬಂದೆ’ ಎಂದು ನೆತ್ತರು ಒಣಗದ ಚಾಕು ತೋರಿಸುತ್ತಾನೆ.

ಎರಡು, ‘ನೀನು ಪ್ರಾಣಿಗಳಿಗೆ ಕಲ್ಲು ಕಟ್ಟಿ ಬಂದೆಯಲ್ಲ ಅವನ್ನು ಬಿಡಿಸು ಹೋಗು. ಬದುಕಿದ್ದರೆ ಬಚಾವಾದೆ, ಸತ್ತು ಹೋಗಿದ್ದರೆ ನಿನ್ನ ಜೀವನ ಪರ್ಯಂತ ಆ ಕಲ್ಲುಗಳನ್ನು ಎದೆಯೊಳಗೆ ಹೊತ್ತುಕೊಂಡು ಓಡಾಡಬೇಕು’ ಎನ್ನುತ್ತಾನೆ. ಶಿಷ್ಯ ಆಶ್ರಮಕ್ಕೆ ಹೇಗೆ ಬಂದ ಗೊತ್ತಿಲ್ಲ. ಬಂದವನು ಆಡುತ್ತಾ ಆಡುತ್ತಾ ನೀರಿನಲ್ಲಿದ್ದ ಕಪ್ಪೆಗೆ, ಮೀನಿಗೆ, ನೀರ ಹೊರಗಿದ್ದ ಹಾವಿಗೆ ಕಲ್ಲು ಕಟ್ಟಿ ಬಿಟ್ಟು ಬರುತ್ತಾನೆ. ನೋಡಿದ ಗುರು ಮಲಗಿದ್ದ ಶಿಷ್ಯನಿಗೆ ಕಲ್ಲು ಕಟ್ಟುತ್ತಾನೆ. ಎದ್ದು ಓಡಾಡಲಾಗದೆ ಕಲ್ಲು ಬಿಚ್ಚು ಎಂದು ಗೋಳಾಡುವ ಶಿಷ್ಯನಿಗೆ ಗುರು ಮೇಲಿನ ಮಾತುಗಳನ್ನು ಹೇಳುತ್ತಾನೆ. ನೋಡಿದರೆ ಹಾವು ಮೀನುಗಳೆರಡೂ ಸತ್ತು ಹೋಗಿರುತ್ತವೆ. ಕಪ್ಪೆ ಬದುಕಿರುತ್ತದೆ. ಮಗು ಕಣ್ಣೀರಿಟ್ಟು ದುಃಖಿಸುತ್ತದೆ. ದೊಡ್ಡವನಾದ ಹುಡುಗ ಕೊಲೆಗಡುಕನಾಗುತ್ತಾನೆ. ಅವನಿಗೆ ಮಹಾಯಾನದ ಪ್ರಜ್ಞಾಪಾರಮಿತ ಸೂತ್ರವನ್ನು ಕೈಯಾರೆ ಕಲಿಯುವಂತೆ ಮಾಡುತ್ತಾನೆ. ಬೌದ್ಧರ ಯಶಸ್ಸು ಇರುವುದು ಶಿಕ್ಷಣವನ್ನು ಕೈಗಳ ಮೂಲಕ ಕಲಿಸುವುದರಲ್ಲಿ ಇರಬೇಕು. ಅನುಭವದಿಂದ ಕಲಿಯುವ ವಿದ್ಯೆಗೆ ತಾಳಿಕೆ ಗುಣ ಹೆಚ್ಚು. ಕಲಿಸುವ ಬೌದ್ಧ ಗುರುಗಳು ಕರುಣೆಯನ್ನೂ ತುಂಬಲು ನೋಡುತ್ತಾರೆ. ಅದು ಎಲ್ಲ ಸಾರಿ ಫಲ ನೀಡದು. ಕೊಲೆಗಾರ ಶಿಷ್ಯನನ್ನು ಪೊಲೀಸರು ಎಳೆದೊಯ್ಯಲು ಬರುತ್ತಾರೆ. ಪ್ರಜ್ಞಾಪಾರಮಿತ ಸೂತ್ರವನ್ನು ಬೆಕ್ಕಿನ ಬಾಲದಲ್ಲಿ ಅದ್ದಿ ಗುರು ಬರೆಯುತ್ತಾ ಹೋಗುತ್ತಾನೆ.

ಶಿಷ್ಯ ಕೊಲೆಗೆ ಬಳಸಿದ ಚಾಕು ಹಿಡಿದು ಮರದ ಹಲಗೆಯ ಮೇಲಿನ ಅಕ್ಷರಗಳನ್ನು ಕೆತ್ತುತ್ತ ಹೋಗುತ್ತಾನೆ. ಪೊಲೀಸನೊಬ್ಬ ಮೇಣದ ಬತ್ತಿ ಹಿಡಿದು ಕೆತ್ತಲು ಸಹಾಯ ಮಾಡುತ್ತಾನೆ. ಕೆತ್ತುತ್ತಲೇ ನಿದ್ದೆ ಹೋದ ಆರೋಪಿಗೆ ತನ್ನ ಕೋಟು ಬಿಚ್ಚಿ ಹೊದಿಸುತ್ತಾನೆ. ಅಕ್ಷರ ಕೆತ್ತಿದ್ದು ಮುಗಿದ ನಂತರ ಬೆಳಗ್ಗೆ ಶಿಷ್ಯನನ್ನು ಬೇಡಿ ತೊಡಿಸದೆ ಕರೆದೊಯ್ಯುತ್ತಾರೆ. ಶಿಷ್ಯನ ಜೊತೆಯಲ್ಲಿ ಬೆಕ್ಕೂ ಸಹ ಗುರುವನ್ನು ಬಿಟ್ಟು ಹೋಗುತ್ತದೆ. ಶಿಷ್ಯನನ್ನು ಎಳೆದೊಯ್ದ ನಂತರ ಗುರು ದೋಣಿಯೊಳಗೆ ಬೆಂಕಿ ಹಚ್ಚಿಕೊಂಡು ದೇಹತ್ಯಾಗ ಮಾಡುತ್ತಾನೆ. ಬಿಡುಗಡೆಯಾದ ಶಿಷ್ಯ ಮರಳಿ ಬರುತ್ತಾನೆ. ತಾನು ಬಾಲ್ಯದಲ್ಲಿ ಕೊಂದಂತದೇ ಹಾವು ಕುಟೀರ ಸೇರಿರುತ್ತದೆ. ಸಂತನಾಗುವಿಕೆ ಅಲ್ಲಿಂದ ಶುರುವಾಗುತ್ತದೆ. ಹೆಪ್ಪುಗಟ್ಟಿದ ಸರೋವರ. ಎಲೆ ಉದುರಿದ ಕಾಡು. ಮೌನವಾದ ಸೃಷ್ಟಿಯ ಒಂದು ಜಾವ ಅಳುವ ಹಸುಗೂಸನ್ನು ಹೊತ್ತ ಮುಖ ಮುಚ್ಚಿಕೊಂಡ ಹೆಣ್ಣೊಬ್ಬಳು ಆಶ್ರಮಕ್ಕೆ ಬರುತ್ತಾಳೆ. ಮಗುವನ್ನು ಆಶ್ರಮದಲ್ಲಿ ಬಿಟ್ಟು ನಡೆಯತೊಡಗುತ್ತಾಳೆ. ಮಂಜು ಗಡ್ಡೆ ಕರಗಿದ್ದ ಒಂದು ನೀರ ಕಂದರಕ್ಕೆ ಬಿದ್ದು ಸಾಯುತ್ತಾಳೆ. ಸಂತನಾಗುವವ ಹೋಗಿ ನೋಡಿದರೆ ಹೆಂಗಸಿನ ಬದಲು ಬುದ್ಧನ ವಿಗ್ರಹ ಸಿಗುತ್ತದೆ. ಮಗು ಚಟುವಟಿಕೆಯಿಂದ ಓಡಾಡತೊಡಗುತ್ತದೆ. ಅದೂ ಕೂಡ, ಮೀನು, ಹಾವು ಮತ್ತು ಕಪ್ಪೆಯ ಬಾಯಿಗೆ ಕಲ್ಲು ತುರುಕಿ ಗಹಗಹಸಿ ನಗುತ್ತದೆ. ಇದು ಸಿನೆಮಾ. ಮಜೀದಿಯ ಮಕ್ಕಳು ದೇವದೂತರು.ವಿಶ್ವ ಮಾನವರು. ಕಿಮ್ ತೋರಿಸುವ ಮಕ್ಕಳೊಳಗೆ ನಿಸರ್ಗದ ಚಲನೆಯನ್ನು ಕಟ್ಟಿ ಹಾಕುವ, ಕೊಂದು ಖುಷಿಪಡುವವರು. ಮಜೀದಿ ದೊಡ್ಡವರ ಸಣ್ಣತನ ಮಕ್ಕಳಾಗುವ ಪ್ರಕ್ರಿಯೆಯಲ್ಲಿ ಅಳಿದು ಹೋಗುತ್ತದೆ ಎನ್ನುತ್ತಾನೆ. ಕಿಮ್ ಮಕ್ಕಳು ಬದುಕನ್ನು ಸ್ಪರ್ಶಿಸಿ ದಾರ್ಶನಿಕರಾಗಬೇಕು, ಜ್ಞಾನ ಎಂಬುದು ಸುಖಾಸುಮ್ಮನೆ ದಕ್ಕುವುದಿಲ್ಲ ಎನ್ನುತ್ತಾನೆ. ಜ್ಞಾನವಿಲ್ಲದ ಮಗುತನ ಉಪಯೋಗವಿಲ್ಲದ್ದು. ಅದು ಮಾಡುವ ಕ್ರೌರ್ಯದ ಭಾರ ಹಗುರವಾದದ್ದೇನೂ ಅಲ್ಲ ಎಂಬುದು ಕಿಮ್ ನಿಲುವು.

ಕಿಮ್ ಇದಿಷ್ಟನ್ನೂ ಋತುಗಳ ಪಲ್ಲಟಗಳ ರೂಪಕದ ಮೂಲಕ ವಿವರಿಸುತ್ತಾನೆ. ಮೋಕ್ಷ ಎನ್ನುವುದು ಸ್ವಂತ ಅನುಭವವಿಲ್ಲದೆ ಉಪದೇಶಗಳಿಂದ ಬರಲಾರದು ಎನ್ನಿಸುತ್ತದೆ. ಬುದ್ಧನೂ ಅನುಭವಗಳ ಮೂಲಕವೇ ಲೋಕ ಸಂಗತಿಗಳನ್ನು ವಿವರಿಸಿದ. ಜತೆಗೆ ಪತಿತನಾಗದೆ ಮನುಷ್ಯ ಪಾವನನಾಗಲಾರನೇ? ಎಂಬೊಂದು ಪ್ರಶ್ನೆಯನ್ನು ಸಿನೆಮಾ ತಣ್ಣಗೆ ಕೇಳುತ್ತದೆ. ಮನುಷ್ಯನಾಳದ ಹಿಂಸೆ ಭೀಕರ ತಾರಕ ಮುಟ್ಟದೆ ಸಾಕ್ಷಾತ್ಕಾರ ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಬುದ್ಧ ಗುರುವೇ ಉತ್ತರ ಹೇಳಬೇಕು. ‘ದ ನೆಟ್’ ಸಿನೆಮಾದ ವಸ್ತು ಯುರೋಪಿಗೆ ಹೊಸತಲ್ಲ. ರಾಷ್ಟ್ರವಾದದ ಗಾಯಗಳು ಯುರೋಪನ್ನು ಮಾಗಿಸಿವೆ. ಆದರೆ ಒಂದೇ ತಾಯ ಮಕ್ಕಳಾದ ಉತ್ತರ, ದಕ್ಷಿಣ ಕೊರಿಯದಂತಹ ಪ್ರಾಚೀನ ಬೌದ್ಧ ರಾಷ್ಟ್ರಗಳು ಇದನ್ನು ಹೇಗೆ ನಿಭಾಯಿಸಬೇಕೆಂದು ತೋಚದೆ ಒದ್ದಾಡುತ್ತಿವೆ. ಉಭಯ ರಾಷ್ಟ್ರಗಳ ಸೈದ್ಧಾಂತಿಕ ಕಲಹಗಳು, ನಿಷ್ಠೆಗಳು ಮನುಷ್ಯನನ್ನು ಹುಳುವಿನಂತೆ ಹೊಸಕಿ ಹಾಕುವುದರ ಕುರಿತು ಸಿನೆಮಾ ಮಾತನಾಡುತ್ತದೆ. ಅತ್ಯಂತ ದಾರಿದ್ರದಲ್ಲಿರುವ ಕಮ್ಯುನಿಸಂನ ಹೆಸರಿನಲ್ಲಿ ಸರ್ವಾಧಿಕಾರಿ ಆಳುತ್ತಿರುವ ಉತ್ತರ ಕೊರಿಯದ ಮೀನುಗಾರನೊಬ್ಬನ ದೋಣಿ ಗಾಳಿಗೆ ಸಿಲುಕಿ ದಕ್ಷಿಣ ಕೊರಿಯ ಭಾಗಕ್ಕೆ ಹರಿದು ಬಿಡುತ್ತದೆ. ಒಂದು ಜುಜುಬಿ ಕೆರೆಯೂ ರಾಷ್ಟ್ರ ರಾಷ್ಟ್ರಗಳ ನಡುವೆ ಹರಿದು ಹೋಗಿರುತ್ತದೆ. ಮೀನುಗಾರನನ್ನು ದಕ್ಷಿಣದ ಸೈನಿಕರು ಬಂಧಿಸುತ್ತಾರೆ. ಭೀಕರ ಹಿಂಸೆ ನೀಡುತ್ತಾರೆ. ಕಡೆಗೆ, ಉತ್ತರ ಕೊರಿಯ ಕುಟುಂಬ ಮೂಲದ ದಕ್ಷಿಣ ಕೊರಿಯದ ತರುಣ ಸೈನಿಕನೊಬ್ಬ ಮೀನುಗಾರನ ನೆರವಿಗೆ ಬರುತ್ತಾನೆ. ಹಾಗಾಗಿ ಮೀನುಗಾರ ಸಾಯದೆ ಉಳಿದುಕೊಳ್ಳುತ್ತಾನೆ. ಹೊರಗಿನವರನ್ನು ಗೂಢಚಾರರೆಂದು ವಿಚಾರಿಸುವ ವೇಳೆ ನೀಡುವ ಭೀಕರ ಹಿಂಸೆ ಎದೆ ನಡುಗಿಸುತ್ತದೆ. ಅನೇಕರು ನಾಲಿಗೆಯನ್ನು ತಿರುಗಿಸಿ ನರ ಕಡಿದುಕೊಂಡು ಸತ್ತು ಬೀಳುತ್ತಾರೆ ಹಿಂಸೆ ತಾಳದೆ.

ಮೀನುಗಾರ ಅಮಾಯಕನೆಂದು ದಕ್ಷಿಣದವರಿಗೆ ಅರ್ಥವಾಗುತ್ತದೆ. ಅದಾದ ನಂತರ ಆತನಿಗೆ ದಕ್ಷಿಣ ರಾಷ್ಟ್ರದ ವೈಭವೋಪೇತ ನಗರ ತೋರಿಸಬೇಕೆಂಬ ತಂತ್ರ ಹೊಳೆಯುತ್ತದೆ. ಶತ್ರು ದೇಶದ ಮನುಷ್ಯನಿಗೆ ತನ್ನ ಸಾಹುಕಾರಿಕೆ ತೋರಿಸಬೇಕೆಂಬುದು ಯುದ್ಧ ತಂತ್ರ ಹಾಗೂ ಕ್ರೌರ್ಯದ ಇನ್ನೊಂದು ಮುಖ. ನೋಡಲು ಮೀನುಗಾರ ನಿರಾಕರಿಸುತ್ತಾನೆ. ನಗರದ ಝಗಮಗಿಸುವ ವೈಭವ ನೋಡಲಾರೆನೆಂದು ಮುಖ ಮುಚ್ಚಿಕೊಳ್ಳುತ್ತಾನೆ. ದಕ್ಷಿಣದವರು ಹೆಣ್ಣು ಮಕ್ಕಳನ್ನು ಮಾರಿ, ತಲೆ ಹಿಡಿದು ನಗರಗಳನ್ನು ಕೊಬ್ಬಿಸಿದ್ದಾರೆ ಎಂಬುದು ಆತನ ಉತ್ತರದವರ ಅಭಿಪ್ರಾಯ. ಇದು ಬಂಡವಾಳಿಗ ದೇಶಗಳ ಕುರಿತಾದ ಕಠೋರ ವಿಮರ್ಶೆ. ಅನ್ನವಿಲ್ಲದೆ ಬಡತನದಲ್ಲಿ ಜನರು ಸಾಯುವ ಚಿತ್ರಣ ಕಮ್ಯುನಿಸ್ಟ್ ಉತ್ತರ ಕೊರಿಯದ ಕುರಿತ ವಿಮರ್ಶೆ. ಮೀನುಗಾರನನ್ನು ನಡು ಬೀದಿಯಲ್ಲಿ ಬಿಟ್ಟು ಸೈನಿಕರು ಹಿಂಬಾಲಿಸ ತೊಡಗುತ್ತಾರೆ. ಆತ ಕಣ್ಣು ಮುಚ್ಚಿಕೊಂಡು ಓಡತೊಡಗುತ್ತಾನೆ. ದಕ್ಷಿಣದವರ ಶ್ರೀಮಂತಿಕೆ ಸೆಳೆದುಬಿಟ್ಟರೆ ಎಂಬ ಭಯ ಅವನದು. ಕಡೆಗೆ ದಿಕ್ಕುಕಾಣದೆ ಬೀದಿ ಬೀದಿಯಲ್ಲಿ ಅಲೆಯುತ್ತಾನೆ. ಹಂದಿಯ ಸೂಪನ್ನು ಜೀವನದಲ್ಲಿ ನೋಡಿಯೇ ಇಲ್ಲವೇನೋ ಎಂಬಂತೆ ಕುಡಿಯುತ್ತಾನೆ. ನಗರದ ವೈಭವ ನೋಡಿ ಬೆರಗಾಗುತ್ತಾನೆ. ಕಡೆಗೆ ತರುಣ ಸೈನಿಕನ ಉಸ್ತುವಾರಿಯೊಳಗೆ ಆತ ದಕ್ಷಿಣದವರ ಕುರಿತು ತುಸು ಉದಾರಿಯಾಗುತ್ತಾನೆ.

ತರುಣ ಹೊಸ ಬಟ್ಟೆಯನ್ನು, ಒಂದಿಷ್ಟು ಹಣವನ್ನು ಕೊಡುತ್ತಾನೆ. ಕಡೆಗೊಂದು ದಿನ ಉತ್ತರದ ಗಡಿಯೊಳಗೆ ಆತನನ್ನು ಬಿಟ್ಟು ಬಿಡುತ್ತಾರೆ. ಈಗ ಉತ್ತರದ ಸೈನಿಕರ ಗೂಢಚಾರಿಕೆ ಶುರುವಾಗುತ್ತದೆ. ತರುಣ ಸೈನಿಕ ನೀಡಿದ್ದ ಹಣವನ್ನು ಮೀನುಗಾರ ತನ್ನ ಗುದದ್ವಾರದೊಳಗೆ ಬಚ್ಚಿಟ್ಟುಕೊಳ್ಳುತ್ತಾನೆ. ಉತ್ತರದವರಿಗೆ ಈತ ಗೂಢಚಾರನಾಗಿ ಬದಲಾಗಿರಬಹುದೇ ಎಂಬ ಅನುಮಾನ. ಜೊತೆಗೆ ಆತ ತಂದಿರಬಹುದಾದ ಹಣದ ಬಗ್ಗೆ ಆಸೆ. ಅಲ್ಲಿನ ಸೈನ್ಯದ ಸ್ಥಳೀಯ ಮುಖಂಡ ಮೀನುಗಾಗರನನ್ನು ಹಿಂಬಾಲಿಸುತ್ತಾನೆ. ಕಡೆಗೆ ಆತ ಮಲ ವಿಸರ್ಜನೆ ಮಾಡಿದ ನಂತರ ಮಲ ಕೆದಕಿ ಹಣವನ್ನು ತೆಗೆದುಕೊಳ್ಳುತ್ತಾನೆ. ಇದು ಉತ್ತರ ಕೊರಿಯದ ಸೈನಿಕರ ಭ್ರಷ್ಟತೆ. ಅವನಿಗೆ ಮೀನು ಹಿಡಿಯಲೂ ಬಿಡದೆ ಕಿರುಕುಳ ನೀಡುತ್ತಾರೆ. ಇತ್ತ ಹೊಟ್ಟೆಗೂ ಇಲ್ಲ. ಸೈನಿಕರ ಕಿರುಕುಳ ಬೇರೆ. ಮೀನುಗಾರ ಪ್ರತಿಭಟಿಸುತ್ತಾನೆ. ಕಡೆಗೆ ತಲ್ಲಣಗೊಳ

share
ನೆಲ್ಲುಕುಂಟೆ ವೆಂಕಟೇಶ್
ನೆಲ್ಲುಕುಂಟೆ ವೆಂಕಟೇಶ್
Next Story
X