ಟಿಆರ್‌ಪಿ ಹಗರಣ: ಬಾರ್ಕ್ ಮಾಜಿ ಸಿಒಒ ಬಂಧನ

ಮುಂಬೈ, ಡಿ. 17: ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್)ನ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ಯನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಟಿಆರ್‌ಪಿ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಕ್ರೈಮ್ ಬ್ರಾಂಚ್‌ನ ತಂಡ ಇಂದು ಅಪರಾಹ್ನ ಬಿಎಆರ್‌ಸಿಯ ಮಾಜಿ ಸಿಒಒ ರೋಮಿಲ್ ರಾಮ್‌ಗರ್ಹಿಯಾ ಅವರನ್ನು ಬಂಧಿಸಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನಂತರ ಅವರನ್ನು ಇಲ್ಲಿನ ಮೆಟ್ರೋಪಾಲಿಟಿನ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಟಿಆರ್‌ಪಿ ಪ್ರಕರಣದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯ ಭಾಗವಾಗಿ ಅವರ ಲ್ಯಾಪ್‌ಟಾಪ್‌ನಲ್ಲಿರುವ ದತ್ತಾಂಶ ಪಡೆದುಕೊಳ್ಳಲು ರೋಮಿಲ್ ರಾಮ್‌ಗರ್ಹಿಯಾ ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿಗಳು ನ್ಯಾಯಾಲಯದ ಮುಂದೆ ಮನವಿ ಮಾಡಿದರು.
ರೋಮಿಲ್ ರಾಮ್‌ಗರ್ಹಿಯಾ ಅವರ ಪರವಾಗಿ ವಾದಿಸಿದ ನ್ಯಾಯವಾದಿ ಮೃಣ್ಮಯಿ ಕುಲಕರ್ಣಿ, ರಾಮ್‌ಗರ್ಹಿಯಾ ಅವರು ತಿಂಗಳ ಹಿಂದೆಯ ಸಂಸ್ಥೆಗೆ ರಾಜೀನಾಮೆ ನೀಡಿರುವುದರಿಂದ ಹಾಗೂ ಟಿಆರ್‌ಪಿ ಹಗರಣದೊಂದಿಗೆ ಅವರಿಗೆ ಯಾವುದೇ ನಂಟು ಇಲ್ಲದೇ ಇರುವುದರಿಂದ ಕಸ್ಟಡಿ ವಿಚಾರಣೆ ಅಗತ್ಯ ಇಲ್ಲ ಎಂದರು.
ವಾದಿ-ಪ್ರತಿವಾದಿಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಆರೋಪಿ ರೋಮಿಲ್ ರಾಮ್‌ಗರ್ಹಿಯಾ ಅವರನ್ನು ಡಿಸೆಂಬರ್ 19ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.







