ರಾಮಮಂದಿರ ನಿರ್ಮಾಣ ಸಹಿಸದ ವಿಪಕ್ಷಗಳು ರೈತರ ಪ್ರತಿಭಟನೆಯ ಹಿಂದಿವೆ ಎಂದ ಆದಿತ್ಯನಾಥ್

ಬರೇಲಿ(ಉತ್ತರಪ್ರದೇಶ): ರೈತರುಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳು ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿವೆ ಎಂದು ಗುರುವಾರ ಆರೋಪಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ರಾಮಮಂದಿರ ನಿರ್ಮಾಣದಿಂದ ಅಸಮಾಧಾನಗೊಂಡಿರುವ ವಿಪಕ್ಷಗಳು ಈ ರೀತಿ ಮಾಡುತ್ತಿವೆ ಎಂಬ ತರ್ಕವನ್ನು ಮುಂದಿಟ್ಟಿದ್ದಾರೆ.
“ಭಾರತವು ಏಕ ಭಾರತ ಹಾಗೂ ಶ್ರೇಷ್ಢ ಭಾರತವಾಗುವುದನ್ನು ಇಷ್ಟಪಡದ ಜನರು ಅಸೂಯೆಯಿಂದ ಹೀಗೆ ಮಾಡುತ್ತಿದ್ದಾರೆ. ಧರಣಿ ನಡೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಎಂಎಸ್ ಪಿ(ಕನಿಷ್ಟ ಬೆಂಬಲ ಬೆಲೆ)ಖಾತ್ರಿ ನೀಡಬೇಕೆಂದು ರೈತರು ಮೊದಲಿಗೆ ಆಗ್ರಹಿಸಿದ್ದರು. ಎಂಎಸ್ ಪಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸರಕಾರ ಹೇಳಿತು.ಹಾಗಾದರೆ ಜನರು ಏಕೆ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲಾಗುತ್ತಿರುವುದನ್ನು ಸಹಿಸಲಾಗದ ವಿಪಕ್ಷಗಳು ಕೋಪಗೊಂಡಿವೆ ಹಾಗೂ ಈ ಪ್ರತಿಭಟನೆಯ ಹಿಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ನಿರ್ಮಾಣಕ್ಕೆ ಈಗಾಗಲೇ ಅಡಿಗಲ್ಲು ಹಾಕಿದ್ದಾರೆ'' ಎಂದು ಪಶ್ಚಿಮ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ರೈತರನ್ನು ಉದ್ದೇಶಿಸಿ ಉ.ಪ್ರ. ಸಿಎಂ ಮಾತನಾಡಿದರು.





