ವಿಸ್ಟ್ರಾನ್ ಕಂಪನಿಯಲ್ಲಿ ಹಿಂಸಾಚಾರ: ಎಸ್ಎಫ್ಐ ಅಧ್ಯಕ್ಷ ಶ್ರೀಕಾಂತ್ ಬಂಧನ

ಕೋಲಾರ, ಡಿ.17: ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೋಲಾರ ತಾಲೂಕು ಎಸ್ಎಫ್ಐ ಅಧ್ಯಕ್ಷ ಶ್ರೀಕಾಂತ್‍ರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಕಾಂತ್ ಶುಕ್ರವಾರ ರಾತ್ರಿಯಿಂದಲೇ ಕಾರ್ಖಾನೆಯ ಕಾರ್ಮಿಕರೂ ಸೇರಿದಂತೆ ನೂರಾರು ಜನರಿಗೆ ಶನಿವಾರ ಪ್ರತಿಭಟನೆ ನಡೆಸಲು ಬರುವಂತೆ ವ್ಯಾಟ್ಸ್ಆ್ಯಪ್ ಸಂದೇಶ ಕಳಿಸಿದ್ದರು. ಇದರ ಆಧಾರದಲ್ಲಿ ಅಂದಿನ ಘಟನೆಗೆ ಶ್ರೀಕಾಂತ್‍ರದ್ದೇ ಮುಖ್ಯ ಪ್ರೇರಣೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗಾಗಲೇ ಶ್ರೀಕಾಂತ್ ಕಾರ್ಮಿಕರ ಮೊಬೈಲ್‍ಗಳಿಗೆ ಕಳಿಸಿರುವ ಸಂದೇಶಗಳ ಖಚಿತ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಎಡಪಕ್ಷಗಳ ಮುಖಂಡರು ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಶ್ರೀಕಾಂತರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಸ್ಟ್ರಾನ್ ಕಂಪನಿಯ ಹಿಂಸಾಚಾರಕ್ಕೆ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಕಾರಣ ಎಂದು ಶನಿವಾರ ಕಾರ್ಖಾನೆಗೆ ಬೇಟಿ ನೀಡಿದ್ದ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದ್ದರು. ಸಂಸದರ ಹೇಳಿಕೆಯನ್ನು ಎಸ್ಎಫ್ಐ ಸಂಘಟನೆಯ ಮುಖಂಡರು ತಿರಸ್ಕರಿಸಿದ್ದರು.





