ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ
ಬೆಂಗಳೂರು, ಡಿ.17: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ರಾಜ್ಯ ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಅವಧಿ ಮುಗಿದಿರುವ ಪಾಲಿಕೆಗೆ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆಯನ್ನು 6 ವಾರಗಳಲ್ಲಿ ಪೂರ್ಣಗೊಳಿಸಬೇಕು. ಅದಾದ 2 ತಿಂಗಳ ಒಳಗೆ ವಾರ್ಡ್ ಮೀಸಲು ಅಧಿಸೂಚನೆಯನ್ನು ಪ್ರಕಟಿಸಬೇಕು. ರಾಜ್ಯ ಸರಕಾರ ಮೀಸಲು ಅಧಿಸೂಚನೆ ಪ್ರಕಟಿಸಿದ 2 ತಿಂಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಅಂತಿಮಗೊಳಿಸಬೇಕು. ಹಾಗೆಯೇ ಮುಂದಿನ 45 ದಿನಗಳಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆಯೋಗಕ್ಕೆ ಆದೇಶಿಸಿದೆ.
ಹೈಕೋರ್ಟ್ ಆದೇಶದಂತೆ 2021ರ ಜುಲೈ ವೇಳೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಒಂದು ವೇಳೆ ಹೈಕೋರ್ಟ್ ನೀಡಿರುವ ಗಡುವಿಗೆ ಮುನ್ನವೇ ವಾರ್ಡ್ ಮರು ವಿಂಗಡಣೆ, ವಾರ್ಡ್ ಮೀಸಲು ಪಟ್ಟಿ ಹಾಗೂ ಮತದಾರರ ಪಟ್ಟಿ ಸಿದ್ದವಾದರೆ ಜುಲೈಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಕರಣವೇನು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರ ಅವಧಿ 2019ರ ಮಾ.6ಕ್ಕೆ ಪೂರ್ಣಗೊಂಡಿತ್ತು. ಆದರೆ, ಚುನಾವಣೆ ನಡೆಸಬೇಕಿದ್ದ ಸರಕಾರ, ಆಡಳಿತಾಧಿಕಾರಿ ನೇಮಿಸಿ ಅವರನ್ನೇ ಮುಂದುವರಿಸಿಕೊಂಡು ಬಂದಿತ್ತು. 2020ರ ಜ.4ರಂದು ಸರಕಾರದ ಕ್ರಮ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ ಬಳಿಕ ಸರಕಾರ, ಹಿಂದಿನ ಮೀಸಲು ಹಾಗೂ ವಾರ್ಡ್ ಮರುವಿಂಗಡಣೆ ಅಧಿಸೂಚನೆಗಳನ್ನು ಹಿಂಪಡೆದು ಹೊಸದಾಗಿ ಪಟ್ಟಿಗಳನ್ನು ಸಿದ್ಧಪಡಿಸಿ ಚುನಾವಣೆ ನಡೆಸುವುದಾಗಿ ಭರವಸೆ ನೀಡಿತ್ತು.
ಇದಕ್ಕೂ ಮುನ್ನ ಚುನಾವಣೆ ಸಂಬಂಧ 2018ರಲ್ಲಿಯೇ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಸಂಬಂಧ ರಾಜ್ಯ ಸರಕಾರ ಎರಡು ಪ್ರತ್ಯೇಕ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಡೆ ನೀಡಿದ್ದರಿಂದ ಅವುಗಳನ್ನು ಹಿಂಪಡೆಯುವುದಾಗಿ ಸರಕಾರ ತಿಳಿಸಿತ್ತು. ಆದರೆ 2020ರಲ್ಲಿ ಚುನಾವಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸುವವರೆಗೂ ಅಧಿಸೂಚನೆಗಳನ್ನು ಹಿಂಪಡೆದಿರಲಿಲ್ಲ. ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದರು. ಜತೆಗೆ ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸುವುದಾಗಿ ಹಾಗು ಚುನಾವಣೆ ನಡೆಸುವುದಾಗಿ ತಿಳಿಸಿದ್ದರು.







