ಅಧಿಕಾರಿಗಳ ಎಡವಟ್ಟಿನಿಂದ ನಾಲ್ವರು ದಲಿತ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ: ಆರೋಪ
ಬೆಂಗಳೂರು, ಡಿ.17: ಮಹದೇವಪುರ ವಿಧಾನಸಭಾ ಕ್ಷೇತ್ರದ ದೊಡ್ಡಬನಹಳ್ಳಿ ಗ್ರಾಮ ಪಂಚಾಯತ್ ಯ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದಾಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದ ನಾಲ್ವರು ದಲಿತ ಸಮುದಾಯದ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಆರೋಪಿಸಲಾಗಿದೆ.
ದೊಡ್ಡಬನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಬನಹಳ್ಳಿ ಕಾಲನಿಯ ವಸಂತಾ, ಪೆರುಮಾಳಪ್ಪ, ಮುನಿರಾಜು ಹಾಗೂ ಸಜೀಲಾ ಎಂಬವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ಧಪಡಿಸಲಾಗಿದ್ದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದ ಕ್ರಮ ಸಂಖ್ಯೆಯನ್ನು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ನಮೂದಿಸಿದ್ದರು.
ಆದರೆ, ಇಂದು ಅಧಿಕಾರಿಗಳು ಹೊಸ ಮತದಾರರ ಪಟ್ಟಿಯನ್ನು ಮುಂದಿಟ್ಟುಕೊಂಡು ನಾಮಪತ್ರ ಪರಿಶೀಲನೆ ನಡೆಸಿದ್ದಾರೆ. ಇದರಿಂದಾಗಿ, ಅಭ್ಯರ್ಥಿಗಳು ನಮೂದಿಸಿದ್ದ ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ. ಅಭ್ಯರ್ಥಿಗಳು ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಈ ನಾಲ್ವರ ನಾಮಪತ್ರಗಳನ್ನು ತಿರಸ್ಕರಿಸಿದ್ದಾರೆ.
ದಲಿತ ಸಮುದಾಯದ ಅಭ್ಯರ್ಥಿಗಳ ನಾಮಪತ್ರಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ. ನಾವು ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ನೀಡಿದ್ದ ಮತದಾರರ ಪಟ್ಟಿಯಲ್ಲಿ ಇದ್ದ ನಮ್ಮ ಕ್ರಮ ಸಂಖ್ಯೆಯನ್ನು ನಮೂದಿಸಿದ್ದೇವೆ. ಆದರೆ, ಈಗ ಹೊಸ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ ಬದಲಾಗಿದೆ ಎಂಬ ಒಂದೇ ಕಾರಣಕ್ಕೆ ನಮ್ಮ ನಾಮಪತ್ರಗಳನ್ನು ಅಧಿಕಾರಿಗಳು ತಿರಸ್ಕರಿಸುವುದು ಯಾವ ನ್ಯಾಯ. ಚುನಾವಣಾ ಅಧಿಕಾರಿಗಳು ನಮ್ಮ ನಾಮಪತ್ರವನ್ನು ಅಂಗೀಕರಿಸಬೇಕು. ಇಲ್ಲದಿದ್ದರೆ, ಉಗ್ರ ಸ್ವರೂಪದ ಹೋರಾಟ ಮಾಡುವುದಲ್ಲದೆ, ತಾಲೂಕು ಕಚೇರಿಗೂ ಮುತ್ತಿಗೆ ಹಾಕುತ್ತೇವೆ. ಅಲ್ಲದೆ, ನಮ್ಮ ಗ್ರಾಮದಿಂದ ಯಾರೊಬ್ಬರೂ ಈ ಚುನಾವಣೆಯಲ್ಲಿ ಮತ ಚಲಾಯಿಸಲು ಬರುವುದಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.







