ಯೋಗ ಇನ್ನು ಸ್ಪರ್ಧಾತ್ಮಕ ಕ್ರೀಡೆ

ಹೊಸದಿಲ್ಲಿ, ಡಿ.18: ಕೇಂದ್ರ ಸರಕಾರ ದೇಶದಲ್ಲಿ ಯೋಗಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ನೀಡಿದೆ. ಇದರಿಂದಾಗಿ ಯೋಗದ ರಾಷ್ಟ್ರೀಯ, ರಾಜ್ಯ ಮತ್ತು ವಿಶ್ವವಿದ್ಯಾನಿಲಯ ಮಟ್ಟದ ಚಾಂಪಿಯನ್‌ಶಿಪ್‌ಗಳನ್ನು ಆಯೋಜಿಸಲು ಭೂಮಿಕೆ ಸಜ್ಜುಗೊಂಡಂತಾಗಿದೆ.
ಯೋಗ ಕ್ರೀಡೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವೃತ್ತಿಪರ ಫುಟ್ಬಾಲ್ ಲೀಗ್ ಎನಿಸಿದ ಇಂಡಿಯನ್ ಸೂಪರ್ ಲೀಗ್ ಮಾದರಿಯಲ್ಲಿ ಯೋಗ ಕ್ರೀಡಾ ಲೀಗ್ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಅಂತಿಮವಾಗಿ ಯೋಗಾಸನವನ್ನು ಒಲಿಂಪಿಕ್ ಗೇಮ್ಸ್‌ಗೆ ಸೇರ್ಪಡೆ ಮಾಡುವಂತೆ ಒತ್ತಡ ತರುವುದು ಸರಕಾರದ ಉದ್ದೇಶ ಎಂದು ಹೇಳಲಾಗುತ್ತಿದೆ.
ಯೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯ ಮತ್ತು ಕ್ರೀಡಾ ಸಚಿವಾಲಯ ಕಾರ್ಯಯೋಜನೆ ಹಮ್ಮಿಕೊಂಡಿದ್ದು, ಯೋಗದ ಪ್ರಯೋಜನಗಳು ಮತ್ತು ಅದರ ಆಧ್ಯಾತ್ಮಿಕ ಹಿನ್ನೆಲೆ ಬಗ್ಗೆಯೂ ಯುವಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. ಯೋಗಾಸನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಸ್ಪರ್ಧಾತ್ಮಕ ಕ್ರೀಡೆಯಾಗುವಂತೆ ಮಾಡುವ ನಿಟ್ಟಿನಲ್ಲೂ ಸಚಿವಾಲಯಗಳು ಪ್ರಯತ್ನ ನಡೆಸಲಿವೆ.
"ಇದೀಗ ಸರಕಾರ ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಅಧಿಕೃತವಾಗಿ ಮಾನ್ಯ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಖೇಲೊ ಇಂಡಿಯಾ ಯೋಜನೆ ಅಂಗವಾಗಿ ಇದು ಜಾರಿಗೆ ಬಂದಿದೆ. ರಾಜ್ಯ ಸರಕಾರಗಳು ಇತರ ಕ್ರೀಡಾಕೂಟಗಳಂತೆ ಯೋಗಾಸನ ಕ್ರೀಡಾಕೂಟವನ್ನೂ ವ್ಯವಸ್ಥಿತವಾಗಿ ಆಯೋಜಿಸುವ ಬಗ್ಗೆ ಕಾರ್ಯೋನ್ಮುಖವಾಗಲಿವೆ" ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.







