ಶಾಲೆಗಳನ್ನು ತೆರೆಯದೇ ಇರುವುದು ಮಕ್ಕಳ ಶಿಕ್ಷಣ, ಆಹಾರದ ಹಕ್ಕುಗಳ ಉಲ್ಲಂಘನೆ: ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನ ಸಮಿತಿ
ರಾಜ್ಯದ ತಾಂತ್ರಿಕ ಸಲಹಾ ಸಮಿತಿಯ ಬರ್ಖಾಸ್ತಿಗೆ ಆಗ್ರಹ

ಮಂಗಳೂರು, ಡಿ.18: ಕರ್ನಾಟಕದಲ್ಲಿ ಮಾರ್ಚ್ ಬಳಿಕ ಕೊರೋನ ಸೋಂಕಿನ ನೆಪದಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದ್ದು ಈಗ ಕೊರೋನ ಹರಡುವಿಕೆಯು ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಬೇರೆಲ್ಲಾ ಚಟುವಟಿಕೆಗಳಿಗೆ ಮುಕ್ತ ಅವಕಾಶವನ್ನು ನೀಡಲಾಗಿದ್ದರೂ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಮಕ್ಕಳಿಗೆ ಕೊರೋನ ಸೋಂಕಿನಿಂದ ಯಾವುದೇ ಅಪಾಯವಿಲ್ಲದಿರುವುದರಿಂದಲೂ, ಕೊರೋನ ಹರಡುವಿಕೆಯು ಈಗಾಗಲೇ ಅತಿ ವಿರಳವಾಗಿರುವುದರಿಂದಲೂ ಬಾಲವಾಡಿಯಿಂದ 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಡಿಸೆಂಬರ್ 15ರೊಳಗೆ ಪೂರ್ಣವಾಗಿ ತೆರೆಯಬೇಕೆಂದು ಒತ್ತಾಯಿಸಿ 'ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನ ಸಮಿತಿ' ಡಿ.7ರಂದು ರಾಜ್ಯದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದೆ.
ತೆರೆಯದೇ ಇದ್ದಲ್ಲಿ ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದೂ ಹೇಳಿರುವ ಸಮಿತಿ, ಸರಕಾರವು ಶಾಲೆಗಳನ್ನು ತೆರೆಯದೇ ಇರುವುದರಿಂದ ಹಲವು ಶಾಲೆಗಳನ್ನು ತೆರೆಯುವ ಪ್ರಯತ್ನಗಳು ಈಗಾಗಲೇ ಆಗಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.
ಶಾಲೆಗಳನ್ನು ತೆರೆಯಲು ಇನ್ನಷ್ಟೇ ನಿರ್ಧರಿಸಬೇಕಿರುವ ಸರಕಾರವು ಜನವರಿ 1ರಿಂದ ಸೀಮಿತ ಮಟ್ಟದಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಶಾಲಾ ಕೊಠಡಿಗಳಲ್ಲೇ ಆರಂಭಿಸುವುದಾಗಿ ಹೇಳಿದೆ. ಈಗ ಲಭ್ಯವಾಗಿರುವ ಮಾಹಿತಿಯಂತೆ ರಾಜ್ಯದ ಕೊರೋನ ಕಾರ್ಯಪಡೆ - ತಾಂತ್ರಿಕ ಸಲಹಾ ಸಮಿತಿಯು 10 ಮತ್ತು 12ನೇ ತರಗತಿಗಳನ್ನು ಜನವರಿ 1ರಿಂದ ತೆರೆಯಬಹುದೆಂದೂ, 6-9 ಮತ್ತು 11ನೇ ತರಗತಿಗಳಿಗೆ ಜನವರಿ 14ರಿಂದ ವಿದ್ಯಾಗಮ ಆರಂಭಿಸಬಹುದೆಂದೂ, 6ಕ್ಕಿಂತ ಕೆಳಗಿನ ತರಗತಿಗಳನ್ನು ತೆರೆಯಲೇಬಾರದೆಂದೂ ಸಲಹೆ ನೀಡಿರುವುದಾಗಿ ವರದಿಯಾಗಿದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ಮಕ್ಕಳ ಭವಿಷ್ಯವನ್ನು ಶಾಶ್ವತವಾಗಿ ಕೆಡಿಸಲಿದೆ. ಈ ಸಲಹೆಯು ಈ ಶೈಕ್ಷಣಿಕ ವರ್ಷವಿಡೀ ಶಾಲೆಗಳನ್ನು ತೆರೆಯದಿರುವ ಹುನ್ನಾರವೆಂಬುದು ಸ್ಪಷ್ಟವಾಗುತ್ತದೆ. ಹೀಗೆ ಒಂದು ವರ್ಷ ಕಲಿಕೆಯಿಂದ ವಂಚಿತರಾದರೆ 3-15 ವಯಸ್ಸಿನ ಎಲ್ಲ ಮಕ್ಕಳೂ ಹಿಂದಿನದನ್ನು ಮರೆತು ಮುಂದಿನದನ್ನು ಕಲಿಯಲಾಗದೆ ಎಂದೆಂದಿಗೂ ಕಷ್ಟಕ್ಕೀಡಾಗಲಿದ್ದಾರೆ ಎಂಬ ಸಾಮಾನ್ಯ ಜ್ಞಾನವೂ ಈ ಸಮಿತಿಯವರಿಗೆ ಇದ್ದಂತಿಲ್ಲ ಎಂದು ಸಮಿತಿ ಟೀಕಿಸಿದೆ.
ಕರ್ನಾಟಕವೂ ಸೇರಿದಂತೆ ವಿಶ್ವಾದ್ಯಂತದಿಂದ ಲಭ್ಯವಿರುವ ವರದಿಗಳನುಸಾರ ಕೊರೋನ ಸೋಂಕು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಯಾವ ಸಮಸ್ಯೆಯನ್ನೂ, ರೋಗಲಕ್ಷಣಗಳನ್ನೂ ಕೂಡ, ಉಂಟು ಮಾಡುವುದಿಲ್ಲ, ಮತ್ತು 10ರಿಂದ 20ರವರೆಗಿನ ಮಕ್ಕಳಲ್ಲೂ ಅತಿ ಸೌಮ್ಯ ಸೋಂಕಾಗಿ, ಯಾವುದೇ ಸಮಸ್ಯೆಯನ್ನುಂಟು ಮಾಡದೆ ವಾಸಿಯಾಗುತ್ತದೆ. ಇದನ್ನೇ ಪರಿಗಣಿಸಿ ಇಂದು ವಿಶ್ವಾದ್ಯಂತ ಪ್ರಾಥಮಿಕ ಶಾಲೆಗಳನ್ನೇ ಆದ್ಯತೆಯ ಮೇರೆಗೆ ಮೊದಲಾಗಿ ತೆರೆಯಲಾಗಿದೆ. ಆದರೆ ನಮ್ಮ ರಾಜ್ಯದ ತಥಾಕಥಿತ ತಾಂತ್ರಿಕ ಸಲಹಾ ಸಮಿತಿಯು ಈ ವೈಜ್ಞಾನಿಕ ಸತ್ಯಕ್ಕೆ ತೀರಾ ತದ್ವಿರುದ್ಧವಾದ, ಅಸಂಬದ್ಧವಾದ ಸಲಹೆಯನ್ನು ನೀಡಿರುವುದು ಖಂಡನೀಯವಾಗಿದೆ. ಆದ್ದರಿಂದ ಇಂಥ ಅವೈಜ್ಞಾನಿಕವಾದ, ಮಕ್ಕಳ ಹಿತಾಸಕ್ತಿಗಳಿಗೆ ಮಾರಕವಾದ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೆಂದೂ, ಈ ತಾಂತ್ರಿಕ ಸಮಿತಿಯನ್ನು ಈ ಕೂಡಲೇ ಬರ್ಖಾಸ್ತು ಮಾಡಬೇಕೆಂದೂ 'ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನ ಸಮಿತಿ' ಆಗ್ರಹಿಸಿದೆ.
ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಜ್ಞರ ಸಮಿತಿಯ ಅಂದಾಜು ಈಗಷ್ಟೇ ಪ್ರಕಟವಾಗಿದ್ದು, ದೇಶದ 60% ಜನರಿಗೆ ಕೊರೋನ ಸೋಂಕಿರಬಹುದೆಂದೂ, ಅದರ ಹರಡುವಿಕೆಯು ಇಳಿಯುತ್ತಿದೆಯೆಂದೂ ಹೇಳಿದೆ. ನಮ್ಮ ರಾಜ್ಯದ ಆರೋಗ್ಯ ಇಲಾಖೆಯು ಈ ಹಿಂದೆ ಪ್ರಕಟಿಸಿದ್ದ ಮಾಹಿತಿಯಲ್ಲೂ ಅದನ್ನೇ ಹೇಳಲಾಗಿತ್ತು. ಹಾಗೆಯೇ, ಕೊರೋನ ಸೋಂಕಿನಿಂದ ಎಲ್ಲಾ ವಯೋವರ್ಗಗಳಲ್ಲಾಗಿರುವ ಸಾವುಗಳ ಬಗ್ಗೆ ಹಲವು ದೇಶಗಳ ವರದಿಗಳನ್ನಾಧಾರಿಸಿ ಯುರೋಪಿಯನ್ ಜರ್ನಲ್ ಆಫ್ ಎಪಿಡೆಮಿಯೋಲಜಿಯಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲೂ ಮಕ್ಕಳಲ್ಲಿ ಕೊರೋನ ಸೋಂಕಿನಿಂದ ಯಾವುದೇ ಮಾರಣಾಂತಿಕ ಸಮಸ್ಯೆಗಳಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಬಾಲವಾಡಿಯಿಂದ 12ರವರೆಗೆ ಎಲ್ಲಾ ತರಗತಿಗಳನ್ನು ಈ ಕೂಡಲೇ ತೆರೆಯುವುದರಿಂದ ಯಾವುದೇ ಸಮಸ್ಯೆಯಾಗದು. ಈ ಕೂಡಲೇ ಶಾಲೆಗಳನ್ನು ತೆರೆಯುವುದರಿಂದ ಜೂನ್ ವರೆಗೆ ಈ ಶೈಕ್ಷಣಿಕ ವರ್ಷದ ಪಾಠಗಳನ್ನು ಕಲಿಸುವುದಕ್ಕೂ ಸಾಧ್ಯವಾಗಲಿದೆ. ಪ್ರತಿಯಾಗಿ, ಶಾಲೆಗಳನ್ನು ತೆರೆಯದೇ ಇರುವುದು ಮಕ್ಕಳ ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಮಾನವಾಧಿಕಾರ ಮತ್ತಿತರ ಎಲ್ಲಾ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ಮಾತ್ರವಲ್ಲ ಮಕ್ಕಳ, ಅದರಲ್ಲೂ 3-10 ವಯಸ್ಸಿನ ಮಕ್ಕಳ, ದೈಹಿಕ, ಮಾನಸಿಕ, ಶೈಕ್ಷಣಿಕ ಮತ್ತು ಮಿದುಳಿನ ಬೆಳವಣಿಗೆಗಳ ಮೇಲೆ ಶಾಶ್ವತವಾದ ಹಾನಿಯನ್ನುಂಟು ಮಾಡಲಿವೆ.
ಆದ್ದರಿಂದ ಈ ಕೂಡಲೇ ಎಲ್ಲಾ ತರಗತಿಗಳನ್ನು ಎಲ್ಲಾ ಶಾಲೆಗಳಲ್ಲಿ ಪುನರಾರಂಭಿಸಬೇಕೆಂದೂ, ತಥಾಕಥಿತ ತಾಂತ್ರಿಕ ಸಲಹಾ ಸಮಿತಿಯನ್ನು ಬರ್ಖಾಸ್ತು ಮಾಡಬೇಕೆಂದೂ ಆಗ್ರಹಿಸಿರುವ ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನ ಸಮಿತಿ, ಈಗಾಗಲೇ ಸಮಿತಿ ಮೂಲಕ ಆರಂಭಿಸಿರುವ ನಮ್ಮೂರ ಶಾಲೆಗಳನ್ನು ನಾವೇ ತೆರೆಯುವ ಅಭಿಯಾನವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲಾಗುವುದು. ಸರಕಾರವು ಇದರಲ್ಲಿ ವಿಫಲವಾದರೆ ಮಾನ್ಯ ಶಿಕ್ಷಣ ಸಚಿವರು ಕೂಡಲೇ ಪದತ್ಯಾಗ ಮಾಡಿ ರಾಜ್ಯದ ಮಕ್ಕಳ ಹಿತರಕ್ಷಣೆ ಮಾಡಬೇಕೆಂದು ಸಮಿತಿ ಪ್ರಕಟನೆಯಲ್ಲಿ ಒತ್ತಾಯಿಸಿದೆ.







