ಮಾನವ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 17 ಸ್ಥಾನ ಕುಸಿತ ಕಂಡ ಭಾರತ: 111ನೇ ಸ್ಥಾನಕ್ಕೆ ಇಳಿಕೆ

ಹೊಸದಿಲ್ಲಿ,ಡಿ.18: ‘ಮಾನವ ಸ್ವಾತಂತ್ರ್ಯ ಸೂಚ್ಯಂಕ-2020’ ವಿಶ್ವಾದ್ಯಂತ ನಾಗರಿಕ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ ಮತ್ತು ಖಾಸಗಿ ಸ್ವಾತಂತ್ರ್ಯಗಳ ಕುರಿತಾದಂತೆ ಕ್ರಮಾಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತವು ಈ ಪಟ್ಟಿಯಲ್ಲಿ 17 ಸ್ಥಾನಗಳ ಕುಸಿತವನ್ನು ಕಂಡಿದೆ ಎಂದು scroll.in ವರದಿ ಮಾಡಿದೆ.
ಒಟ್ಟು 162 ರಾಷ್ಟ್ರಗಳ ಕುರಿತು ನಡೆಸಿದ ಅಧ್ಯಯನದಲ್ಲಿ ಭಾರತವು 111ನೇ ಸ್ಥಾನವನ್ನು ಗಳಿಸಿದೆ. 2019ರ ಪಟ್ಟಿಯಲ್ಲಿ ಭಾರತವು 94ನೇ ಸ್ಥಾನವನ್ನು ಗಳಿಸಿತ್ತು.
ಚೀನಾ ಮತ್ತು ಬಾಂಗ್ಲಾದೇಶವು ಕ್ರಮವಾಗಿ 129 ಮತ್ತು 139ನೇ ಸ್ಥಾನ ಗಳಿಸಿದ್ದು, ಭಾರತವು ಇವೆರಡು ದೇಶಕ್ಕಿಂತ ಮುಂದಿದೆ. ನ್ಯೂಜಿಲೆಂಡ್, ಸ್ವಿಟ್ಜೆರ್ಲೆಂಡ್ ಮತ್ತು ಹಾಂಕಾಂಗ್ ದೇಶಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಅಲಂಕರಿಸಿವೆ.
ಈ ವರದಿ ತಯಾರಕರಾದ ಫ್ರೆಡ್ ಮ್ಯಾಕ್ ಮಹೋನ್ ಮತ್ತು ಇಯಾನ್ ವಾಸ್ಕ್ವಿಝ್ ಪ್ರಕಾರ, ಚೀನಾದ ದುರಾಕ್ರಮಣ ನೀತಿಯ ಕಾರಣದಿಂದಾಗಿ ಭವಿಷ್ಯದಲ್ಲಿ ಹಾಂಕಾಂಗ್ ನ ಸ್ಥಾನವು ಕುಸಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತವು ಖಾಸಗಿ ಸ್ವಾತಂತ್ರ್ಯದಲ್ಲಿ 10ರಲ್ಲಿ 6.30 ಅಂಕಗಳು, ಆರ್ಥಿಕ ಸ್ವಾತಂತ್ರ್ಯದಲ್ಲಿ 6.56 ಹಾಗೂ ಒಟ್ಟು ಮಾನವ ಸ್ವಾತಂತ್ರ್ಯದಲ್ಲಿ 6.43 ಅಂಕಗಳನ್ನು ಗಳಿಸಿದೆ ಎಂದು ವರದಿಯಾಗಿದೆ.





