ವಿಶ್ವಸಂಸ್ಥೆಯ ‘ಯಂಗ್ ಚಾಂಪಿಯನ್ ಆಫ್ ಅರ್ಥ್’ ಪ್ರಶಸ್ತಿಗೆ ಭಾರತೀಯ ಯುವ ಉದ್ಯಮಿ ವಿದ್ಯುತ್ ಮೋಹನ್ ಆಯ್ಕೆ

ಹೊಸದಿಲ್ಲಿ,ಡಿ.18: ರೈತರು ತಮ್ಮ ಕೃಷಿ ತ್ಯಾಜ್ಯವನ್ನು ಸುಡುವುದನ್ನು ತಡೆದು, ತ್ಯಾಜ್ಯಗಳನ್ನು ಮೌಲ್ಯವರ್ಧಿತ ರಾಸಾಯನಿಕಗಳನ್ನಾಗಿ ಸ್ಥಳದಲ್ಲಿಯೇ ಪರಿವರ್ತಿಸಲು ಸಹಾಯ ಮಾಡಿ ಈ ಮೂಲಕ ಅವರು ಹೆಚ್ಚುವರಿ ಆದಾಯ ಗಳಿಸುವಂತೆ ಮಾಡುವ `ತಕಚರ್' ಎಂಬ ಸಾಮಾಜಿಕ ಸಂಸ್ಥೆಯ ಸಹ ಸ್ಥಾಪಕ, 29 ವರ್ಷದ ಇಂಜಿನಿಯರ್, ವಿದ್ಯುತ್ ಮೋಹನ್ ಅವರು ವಿಶ್ವ ಸಂಸ್ಥೆಯ ಪರಿಸರ ಏಜನ್ಸಿ ನೀಡುವ ಪ್ರತಿಷ್ಠಿತ `ಯಂಗ್ ಚಾಂಪಿಯನ್ಸ್ ಆಫ್ ದಿ ಅರ್ತ್' 2020 ಪ್ರಶಸ್ತಿಗೆ ಆಯ್ಕೆಯಾದ ಏಳು ಮಂದಿಯಲ್ಲಿ ಒಬ್ಬರಾಗಿದ್ದಾರೆ.
ವಿದ್ಯುತ್ ಮೋಹನ್ ಅವರ ಸಂಸ್ಥೆ ರೈತರಿಂದ ಅಕ್ಕಿಯ ಸಿಪ್ಪೆ, ತೆಂಗಿನ ಚಿಪ್ಪು ಹಾಗೂ ಒಣಹುಲ್ಲನ್ನು ಸಂಗ್ರಹಿಸಿ ಅವುಗಳನ್ನು ಇದ್ದಿಲು ಆಗಿ ಪರಿವರ್ತಿಸಿ, ರೈತರು ತ್ಯಾಜ್ಯಗಳನ್ನು ಸುಟ್ಟು ಪರಿಸರ ಮಾಲಿನ್ಯ ಸೃಷ್ಟಿಸದಂತೆ ತಡೆಯುತ್ತದೆ. 2018ರಲ್ಲಿ ಈ ಸಂಸ್ಥೆ ಆರಂಭಗೊಂಡಿದ್ದು ಇಲ್ಲಿಯ ತನಕ ವಿದ್ಯುತ್ ಮೋಹನ್ ತಮ್ಮ ಸಂಸ್ಥೆಯ ಇನ್ನೊಬ್ಬ ಸ್ಥಾಪಕ ಕೆವಿನ್ ಕುಂಗ್ ಅವರ ಜತೆಗೂಡಿ 4,500 ರೈತರ ಜತೆ ಕೆಲಸ ಮಾಡಿ 3,000 ಟನ್ ತ್ಯಾಜ್ಯ ಸಂಸ್ಕರಿಸಿದ್ದಾರೆ ಎಂದು ವರದಿ ತಿಳಿಸಿದೆ.





