ಸಚಿವ ಸುರೇಶ್ ಕುಮಾರ್ ರಾಜೀನಾಮೆಗೆ ಶಿಕ್ಷಣ ತಜ್ಞರು, ಪ್ರಗತಿಪರ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರು, ಡಿ.18: ರಾಜ್ಯ ಸರಕಾರ ಕೋವಿಡ್‍ನ್ನು ನೆಪವಾಗಿಟ್ಟು ಶಾಲೆಗಳನ್ನು ತೆರೆಯದೆ ಬಡ, ಮಧ್ಯಮ ವರ್ಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದು, ಇದಕ್ಕೆ ಪ್ರಮುಖ ಕಾರಣವಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕೆಂದು ರಾಜ್ಯಾದ್ಯಂತ ಶಿಕ್ಷಣ ತಜ್ಞರು, ವೈದ್ಯರು, ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಿಕ್ಷಣ ತಜ್ಞ ನಿರಂಜನಾರಾಧ್ಯ, ಕೊರೋನ ಹರಡುವಿಕೆಯು ಇಳಿಮುಖವಾದ ಪರಿಣಾಮ ಬೇರೆಲ್ಲಾ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಮಕ್ಕಳಿಗೆ ಕೊರೋನ ಸೋಂಕಿನಿಂದ ಯಾವುದೇ ಅಪಾಯವಿಲ್ಲವೆಂದು ವೈದ್ಯ ತಜ್ಞರು ವೈಜ್ಞಾನಿಕವಾಗಿ ಮಾಹಿತಿ ನೀಡಿದ್ದಾರೆ. ಆದರೂ ಶಾಲೆಗಳನ್ನು ಆರಂಭಿಸುವಲ್ಲಿ ಸರಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಕೊರೋನ ಕಾರ್ಯಪಡೆಯ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರಕಾರಕ್ಕೆ ನೀಡಿರುವ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಆರನೇ ತರಗತಿಗಿಂತ ಕೆಳ ಹಂತದ ತರಗತಿಗಳನ್ನು ತೆರೆಯಲೇಬಾರದೆಂದು ಸಲಹೆ ನೀಡಿದ್ದು, ಇದು ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಅಪಾಯಕಾರಿ ನಿಲುವಾಗಿದೆ ಎಂದು ಆವರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯವು ಸೇರಿದಂತೆ ವಿಶ್ವದಾದ್ಯಂತ ಲಭ್ಯವಿರುವ ವರದಿಗಳನುಸಾರ ಕೊರೋನ ಸೋಂಕು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಯಾವ ಸಮಸ್ಯೆಯನ್ನೂ, ರೋಗಲಕ್ಷಣಗಳನ್ನೂ ಉಂಟು ಮಾಡುವುದಿಲ್ಲ. ಹಾಗೂ 10ರಿಂದ 20ವರ್ಷದ ಮಕ್ಕಳಲ್ಲೂ ಅತಿ ಸೌಮ್ಯ ಸೋಂಕಾಗಿ, ಯಾವುದೇ ಸಮಸ್ಯೆಯನ್ನುಂಟು ಮಾಡದೆ ವಾಸಿಯಾಗುತ್ತದೆ. ಇದನ್ನೇ ಪರಿಗಣಿಸಿ ಇಂದು ವಿಶ್ವದಾದ್ಯಂತ ಪ್ರಾಥಮಿಕ ಶಾಲೆಗಳನ್ನೇ ಆದ್ಯತೆಯ ಮೇರೆಗೆ ಮೊದಲಾಗಿ ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುರೋಪಿಯನ್ ಜರ್ನಲ್ ಆಫ್ ಎಪಿಡೆಮಿಯೋಲಜಿಯಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲೂ ಮಕ್ಕಳಲ್ಲಿ ಕೊರೋನ ಸೋಂಕಿನಿಂದ ಯಾವುದೇ ಮಾರಣಾಂತಿಕ ಸಮಸ್ಯೆಗಳಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಬಾಲವಾಡಿಯಿಂದ 12ರವರೆಗಿನ ಎಲ್ಲಾ ತರಗತಿಗಳನ್ನು ತೆರೆಯುವುದರಿಂದ ಯಾವುದೇ ಸಮಸ್ಯೆಯಾಗದು. ಈ ಕೂಡಲೇ ಶಾಲೆಗಳನ್ನು ತೆರೆಯುವುದರಿಂದ ಮುಂದಿನ ಜೂನ್‍ವರೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಪಾಠಗಳನ್ನು ಕಲಿಸುವುದಕ್ಕೂ ಸಾಧ್ಯವಾಗಲಿದೆ ಎಂದು ಶಿಕ್ಷಣ ತಜ್ಞರು, ಶಿಕ್ಷಣ ಸಂಘಟನೆಗಳ ಮುಖಂಡರು ಅಭಿಪ್ರಾಯಿಸಿದ್ದಾರೆ.
ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನದ ಸಮಿತಿಯ ಪರವಾಗಿ ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಎಐಎಸ್‍ಎಫ್ ರಾಜ್ಯಾಧ್ಯಕ್ಷೆ ಜ್ಯೋತಿ, ಎಸ್‍ಎಫ್‍ಐ ವಾಸುದೇವ ರೆಡ್ಡಿ, ಕೆವಿಎಸ್ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ, ಬಿವಿಎಸ್ ರಾಜ್ಯ ಸಂಚಾಲಕ ಡಾ.ಶ್ರೀನಿವಾಸ್, ಎಐವೈಎಫ್ ಅಧ್ಯಕ್ಷ ಪುಷ್ಪರಾಜ್ ಬೋಳೂರು, ತೋಳಿ ಭರಮಣ್ಣ, ತಿಪ್ಪೇಸ್ವಾಮಿ ಕೆಟಿ ಹೇಳಿಕೆ ನೀಡಿದ್ದಾರೆ.
ಅಭಿಯಾನದ ಪರವಾಗಿ ವೈದ್ಯಕೀಯ ತಜ್ಞ ಡಾ.ಶ್ರೀನಿವಾಸ್ ಕಕ್ಕಿಲ್ಲಾಯ, ಶಿಶು ತಜ್ಞ ಡಾ.ಯೋಗಾನಂದ ರೆಡ್ಡಿ, ಹೊಸತು ಮಾಸಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ್, ಹಿರಿಯ ಕವಿ ಡಾ.ವಡ್ಡಗೆರೆ ನಾಗರಾಜಯ್ಯ, ಶಿಕ್ಷಣ ತಜ್ಞ ಶ್ರೀಪಾದ ಭಟ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಪ್ರಸಾದ್, ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್, ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ, ನರಶಾಸ್ತ್ರ ಚಿಕಿತ್ಸಾ ವೈದ್ಯ ಡಾ.ಭಾನುಪ್ರಕಾಶ್ ಮತ್ತಿತರ ತಜ್ಞರು ಶಾಲೆಗಳನ್ನು ತೆರೆಯುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಶಾಲೆಗಳನ್ನು ತೆರೆಯದೇ ಇರುವುದು ಮಕ್ಕಳ ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಮಾನವಾಧಿಕಾರ ಮತ್ತಿತರ ಎಲ್ಲಾ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಮಾತ್ರವಲ್ಲ 3ರಿಂದ 10 ವಯಸ್ಸಿನ ಮಕ್ಕಳ, ದೈಹಿಕ, ಮಾನಸಿಕ, ಶೈಕ್ಷಣಿಕ ಮತ್ತು ಮಿದುಳಿನ ಬೆಳವಣಿಗೆಗಳ ಮೇಲೆ ಶಾಶ್ವತವಾದ ಹಾನಿಯನ್ನುಂಟು ಮಾಡಲಿವೆ.
-ನಿರಂಜನಾರಾಧ್ಯ, ಶಿಕ್ಷಣ ತಜ್ಞರು







