ಅನರ್ಹ ಸದಸ್ಯರ ನೇಮಕ ಆರೋಪ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿಂದ ನೋಟಿಸ್ ಜಾರಿ

ಬೆಂಗಳೂರು, ಡಿ.18: ರಾಜ್ಯದಲ್ಲಿರುವ ಬಾಲ ನ್ಯಾಯ ಮಂಡಳಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಕರ್ನಾಟಕ ರಾಜ್ಯ ಆಯ್ಕೆ ಸಮಿತಿಯು ಇಬ್ಬರು ಅನರ್ಹ ಸದಸ್ಯರನ್ನು ನೇಮಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಂಡಳಿ ಮತ್ತು ಸಮಿತಿಗಳಿಗೆ ಸದಸ್ಯ-ಅಧ್ಯಕ್ಷರನ್ನು ನೇಮಕ ಮಾಡುವ ಆಯ್ಕೆ ಸಮಿತಿಗೆ ಅರ್ಹತೆ ಇಲ್ಲದವರನ್ನು ನೇಮಿಸಲಾಗಿದೆ ಎಂದು ಆರೋಪಿಸಿ ವಕೀಲೆ ಸುಧಾ ಕಾಟ್ವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಎಸ್.ಉಮಾಪತಿ ಅವರ ವಾದ ಆಲಿಸಿದ ಪೀಠ, ಸರಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜ.28ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ: ರಾಜ್ಯದ ಬಾಲ ನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಕರ್ನಾಟಕ ರಾಜ್ಯ ಆಯ್ಕೆ ಸಮಿತಿ ಹೊಂದಿದೆ. ಈ ಸಮಿತಿಗೆ ಸರಕಾರೇತರ ಸಂಸ್ಥೆಗೆ ಸೇರಿದ ಲತಾ ಜಗದೀಶ್ ನಾರಾಯಣ ಮತ್ತು ಎಸ್.ಎಂ.ಬಡಸ್ಕರ್ ಅವರನ್ನು ಸದಸ್ಯರನ್ನಾಗಿ ಸರಕಾರ ನೇಮಿಸಿದೆ. ಅವರ ನೇಮಕಾತಿಯು ಬಾಲ ನ್ಯಾಯ ಕಾಯ್ದೆ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಮಾದರಿ ನಿಯಮಗಳು-2016ರ ನಿಯಮ 87(1)(3)ಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಲತಾ ಹಾಗೂ ಬಡಸ್ಕರ್ ಅವರಿಗೆ ಮಕ್ಕಳ ಅಭಿವೃದ್ಧಿ ಮತ್ತು ಆರೈಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ಪರಿಣಿತಿ ಹಾಗೂ ಅನುಭವ ಇಲ್ಲ. ಸಕಾರಣಗಳು ಇಲ್ಲದೇ ಅವರನ್ನು ನೇಮಕ ಮಾಡಲಾಗಿದೆ. ಹೀಗಾಗಿ, ಇವರು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುವುದಕ್ಕೆ ತಡೆ ನೀಡಬೇಕು. ಸರಕಾರೇತರ ಸಂಸ್ಥೆಗಳಿಂದ ಅರ್ಹರನ್ನು ಆಯ್ಕೆ ಸಮಿತಿಗೆ ನೇಮಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.







