ಹಾಸನ ಜಿಲ್ಲೆ ಹೊಳೆನರಸೀಪುರದ ಅರಣ್ಯ ಇಲಾಖೆಯ ಅಮಾನವೀಯತೆ: 3 ದಶಕಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿರುವ ದಲಿತ ಕುಟುಂಬ

ಉಡುಪಿ, ಡಿ.18: ಹಾಸನ ಜಿಲ್ಲೆ ಹೊಳೆನರಸೀಪುರ ಡಾ.ಅಂಬೇಡ್ಕರ್ ಕಾಲನಿಯ 87ರ ಹರೆಯ ಗಿಡ್ಡಯ್ಯ, ತಮ್ಮ ಕುಟುಂಬಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದಾಗಿರುವ ಅನ್ಯಾಯದ ವಿರುದ್ಧ ಕಳೆದ 36 ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತಿದ್ದಾರೆ. ರೇಂಜ್ ಫಾರೆಸ್ಟ್ ಅಧಿಕಾರಿಯಿಂದ ಹಿಡಿದು ಅರಣ್ಯ ಇಲಾಖೆಯ ಕಾರ್ಯದರ್ಶಿ, ಅರಣ್ಯಸಚಿವರವರೆಗೆ ಎಲ್ಲರಿಗೂ ಮನವಿ, ಬೇಡಿಕೆ, ಶಿಫಾರಸ್ಸು ಪತ್ರಗಳನ್ನು ಸಲ್ಲಿಸುತ್ತಲೇ ಆಯಸ್ಸು ಕಳೆದಿರುವ ಈ ಬಡ ಕುಟುಂಬ ಇದೀಗ ನ್ಯಾಯಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೊಕ್ಕಿದೆ.
ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಇಂದು ಗಿಡ್ಡಯ್ಯ, ಅವರ ಪತ್ನಿ ದೇವಿರಮ್ಮ ಹಾಗೂ ಅರಣ್ಯ ಇಲಾಖೆಯಿಂದ ಅನ್ಯಾಯಕ್ಕೊಳಗಾಗಿ ಹೋರಾಟ ನಡೆಸುತ್ತಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಅಣ್ಣನ ಪರವಾಗಿ ಹಾಗೂ ತನಗೂ ಅದೇ ಇಲಾಖೆಯಿಂದ ಆದ ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಮಗಳು ಹೇಮಲತಾರೊಂದಿಗೆ ಸೇರಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಅತ್ಯಂತ ಬಡ, ಯಾರ ಬೆಂಬಲವೂ ಇಲ್ಲದ ದಲಿತ ಕುಟುಂಬದ ಕರು ಣಾಜನಕ ಕಥೆಯನ್ನು ವಿವರಿಸಿದರು.
ಅಂಬೇಡ್ಕರ್ ಕಾಲನಿಯಲ್ಲಿ ಮುರುಕಲು ಮನೆಯಲ್ಲಿ ವಾಸವಾಗಿರುವ 87 ವರ್ಷ ಪ್ರಾಯದ ಗಿಡ್ಡಯ್ಯರಿಗೆ ಈಗ ನಡೆಯಲು ಸಹ ಸಾದ್ಯವಿಲ್ಲದ ಸ್ಥಿತಿ ಇದೆ. ಇಂಥ ಸ್ಥಿತಿಯಲ್ಲೂ ಅವರು ಹೊಳೆನರಸೀಪುರ, ಹಾಸನ, ಬೆಂಗಳೂರು ಎಂದು ಅಲೆಯದ ಊರುಗಳಿಲ್ಲ, ಅಡ್ಡಬೀಳಿದ ಅಧಿಕಾರಿಗಳಿಲ್ಲ. ಆದರೆ ಯಾರೊಬ್ಬರೂ ತನ್ನ ಮೇಲೆ ಈವರೆಗೆ ಕರುಣೆಯ ಲವಲೇಶವನ್ನೂ ತೋರಿಸಿಲ್ಲ ಎಂದು ಗಿಡ್ಡಯ್ಯರೇ ನಡಗುವ ಸ್ವರದಲ್ಲಿ ಹೇಳುತ್ತಾರೆ.
ದಿನಗೂಲಿ ನೌಕರನಾಗಿ ಬರುವ ಅಲ್ಪ ಆದಾಯದಲ್ಲಿ 9 ಸದಸ್ಯರ ಕುಟುಂಬದ ಪಾಲನೆಯನ್ನು ಕಷ್ಟದಿಂದ ನಡೆಸಿದ್ದ ಗಿಡ್ಡಯ್ಯರ ಎರಡನೇ ಮಗ ಎಚ್.ಜಿ. ನರಸಿಂಹ ಮೂರ್ತಿ, ಕುಟುಂಬಕ್ಕೆ ಆಧಾರವಾಗಲು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ 1984ರ ಎ.1ರಂದು ದಿನಗೂಲಿ ಅರಣ್ಯ ವೀಕ್ಷಕನಾಗಿ ಅರಣ್ಯ ಇಲಾಖೆಯನ್ನು ಸೇರಿಕೊಂಡಿದ್ದರು. 1987ರ ಜು.1ಕ್ಕೆ ಮೊದಲು ಕೆಲಸಕ್ಕೆ ಸೇರಿದ ದಿನಗೂಲಿ ನೌಕರನ್ನು ಕೆಲಸದಿಂದ ತೆಗೆಯಬಾರದೆಂಬ ಸುಪ್ರೀಂ ಕೋರ್ಟಿನ ಸ್ಪಷ್ಟ ಆದೇಶವಿದ್ದು, ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದರೂ ಅರಣ್ಯ ಇಲಾಖೆ 1988ರ ಜ.14ರಂದು ಇವರನ್ನು ಕೆಲಸದಿಂದ ಕಿತ್ತುಹಾಕಿತ್ತು.
ಹಲವು ಬಾರಿ ಮನವಿ ಸಲ್ಲಿಸಿ ಪ್ರಯೋಜನವಾಗದಿದ್ದಾಗ ಇವರು ಕಾರ್ಮಿಕ ನ್ಯಾಯಲಯದಲ್ಲಿ ದೂರು ದಾಖಲಿಸಿದರು. 1991ರ ಜು.3ರಂದು ಕಾರ್ಮಿಕ ನ್ಯಾಯಾಲಯ ನರಸಿಂಹ ಮೂರ್ತಿ ಪರ ತೀರ್ಪು ನೀಡಿ ಅವರನ್ನು ಮರುನೇಮಕ ಮಾಡಿಕೊಳ್ಳುವಂತೆ ಆದೇಶಿಸಿತು. ಅಲ್ಲದೇ ಅಲ್ಲಿನವರೆಗಿನ ಸಂಬಳವನ್ನೂ ನೀಡುವಂತೆ ಆದೇಶಿಸಿತ್ತು.
ಅಧಿಕಾರಿಗಳು ನರಸಿಂಹಮೂರ್ತಿ ಅವರನ್ನು ಮರುನೇಮಕ ಮಾಡಿ ಕೊಂಡರೂ, ಆ ದಿನಗಳ ಸಂಬಳ ನೀಡಲಿಲ್ಲ. ಮತ್ತೆ ಅವರು ದಾವೆ ಹೂಡಿ, ತನಿಖೆ ನಡೆದು 2001ರಲ್ಲಿ ಅವರ ಪರ ತೀರ್ಪು ಬಂದರೂ, ಏಳು ವರ್ಷಗಳ ಸಂಬಳ 45,944ರೂ. ಅವರ ಕೈಸೇರಿದ್ದು ಮತ್ತೆ ನಾಲ್ಕು ವರ್ಷಗಳ ಬಳಿಕವೇ.
ಈ ನಡುವೆ 1984ರ ಜು.1ಕ್ಕೆ ಮೊದಲು ಕೆಲಸಕ್ಕೆ ಸೇರಿದ ದಿನಗೂಲಿ ನೌಕರರು ಸತತ 10 ವರ್ಷಗಳ ಕಾಲ (2400ದಿನ) ಸೇವೆ ಸಲ್ಲಿಸಿದ್ದಲ್ಲಿ ಅವರ ಸೇವೆಯನ್ನು ಶಾಶ್ವತ ನೌಕರರೆಂದು ಪರಿಗಣಿಸುವಂತೆ 1994ರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರವೂ ಸುತ್ತೋಲೆ ಹೊರಡಿಸಿತು.
ಆದರೆ ಅರಣ್ಯ ಇಲಾಖೆ ಈ ವಿಚಾರದಲ್ಲೂ ಆದೇಶವನ್ನು ಉಲ್ಲಂಘಿಸಿ ಮೂರ್ತಿ ಅವರ ಸೇವೆಯನ್ನು ಖಾಯಂಗೊಳಿಸಲಿಲ್ಲ. ಸಾವಿರಾರು ಮಂದಿ ದಿನಗೂಲಿ ನೌಕರರು ಇದರ ಪ್ರಯೋಜನ ಪಡೆದರೂ, ಹೊಳೆನರಸೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಇವರನ್ನು ಖಾಯಂಗೊಳಿಸದೇ ಅನ್ಯಾಯ ವೆಸಗಿದರು.
ಇದಕ್ಕಿಂತ ಗಂಭೀರವಾದ ಅನ್ಯಾಯವನ್ನು ಎಸಗಿದ ಅರಣ್ಯ ಇಲಾಖೆ ಅಧಿಕಾರಿಗಳು, ಇವರ ಸೇವಾವಧಿಯನ್ನು ಅಲ್ಲಿನ ಎಸ್.ನರಸಿಂಹ ಮೂರ್ತಿ ಎಂಬವರ ಸೇವಾವಧಿ ಎಂದು ಪರಿಗಣಿಸಿ ಅವರ ಸೇವೆಯನ್ನು ಖಾಯಂ ಗೊಳಿಸಿತು. ಇದರಿಂದ ಖಿನ್ನತೆಗೊಳಗಾದ ನರಸಿಂಹ ಮೂರ್ತಿ ವೃದ್ಧ ತಂದೆ-ತಾಯಿ, ಅವಿವಾಹಿತ ಸಹೋದರಿಯರು ಹಾಗೂ ಸಹೋದರರನ್ನು ಬಿಟ್ಟು 2007ರ ಆ.24ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟರು.
ತಂಗಿಗೂ ಮಾನಸಿಕ ಹಿಂಸೆ: ಇದೇ ವೇಳೆ ಗಿಡ್ಡಯ್ಯರ ಎರಡನೇ ಮಗಳು ಹೇಮಲತಾ ಪದವಿ ಮುಗಿಸಿ ಕಂಪ್ಯೂಟರ್ ಸರ್ಟಿಫಿಕೇಟ್ ಪಡೆದು, ಹೊಳೆನರಸೀಪುರ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆ ಖಾಲಿಯಾದಾಗ ಅರ್ಜಿ ಹಾಕಿದ್ದರು. ಬೇರೆ ಯಾರೂ ಇಲ್ಲದ ಕಾರಣ ಅಕೆಗೆ ಯಾವೊಂದು ಸೇವಾ ಭದ್ರತೆ ಇಲ್ಲದೇ ಕೆಲಸಕ್ಕೆ ತೆಗೆದು ಕೊಂಡು 1000ರೂ.ವನ್ನು ನೀಡುತಿದ್ದರು.
2007ರಲ್ಲಿ ನರಸಿಂಹ ಮೂರ್ತಿ ಮೃತಪಟ್ಟಾಗ, ಮಗನ ಸೇವೆಯನ್ನು ಖಾಯಂಗೊಳಿಸಿ, ಕುಟುಂಬದ 8 ಮಂದಿಯಲ್ಲಿ ಯಾರಿಗಾದರೂ ಅನುಕಂಪದ ಆಧಾರದಲ್ಲಿ ಕೆಲಸ ನೀಡಲು ಗಿಡ್ಡಯ್ಯ ಮೇಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ‘ನಿಮ್ಮ ಮಗ 1984ರಿಂದ ಸತತ 10 ವರ್ಷ ಕೆಲಸ ಮಾಡದ ಕಾರಣ (ದಾಖಲೆಗಳಲ್ಲಿ ಮೂರ್ತಿ 2400 ದಿನಗಳ ಬದಲು 8000ಕ್ಕೂ ಅಧಿಕ ದಿನ ಅಲ್ಲಿ ಕೆಲಸ ಮಾಡಿದ್ದರು.) ಅನುಕಂಪ ಆಧಾರದಲ್ಲಿ ಕೆಲಸ ನೀಡಲು ಸಾದ್ಯವಿಲ್ಲ ಎಂದು ಹಾಸನದ ಉಪ ಸಂರಕ್ಷಣಾಧಿಕಾರಿ ಬಾಲಚಂದರ್ ಹಿಂಬರಹ ನೀಡಿದರು. ಹೇಮಲತಾಗೆ ಕಂಪ್ಯೂಟರ್ ಆಪರೇಟರ್ ಆಗಿ ಸೇರಿಸಿಕೊಂಡರು.
ಆದರೆ ಹೇಮಲತಾ 2007ರಿಂದ 2016ರವರೆಗೆ ಕೇವಲ 1,000ರೂ. ಸಂಬಳದಲ್ಲಿ ಕೆಲಸ ಮಾಡಿದರು. ತನ್ನನ್ನು ಖಾಯಂಗೊಳಿಸುವಂತೆ ಇಲಾಖೆಯ ದರ ಪಟ್ಟಿಯಂತೆ ಸಂಬಳ ನೀಡುವಂತೆ ಹೇಮಲತಾ ಮಾಡಿಕೊಂಡ ಮನವಿಗೆ ಅಧಿಕಾರಿಗಳು ನಿರ್ಲಕ್ಷದ ಉತ್ತರ ನೀಡಿದ್ದರು. ದರಪಟ್ಟಿ ಸಂಬಳ ಕೇಳಿದ ಕಾರಣ 2016ನೇ ನವೆಂಬರ್‌ನಲ್ಲಿ ಹೇಮಲತಾರನ್ನು ಕೆಲಸದಿಂದ ತೆಗೆದುಹಾಕಿದರು. ಅವರ ಯಾವುದೇ ಮನವಿಗೂ ಅರಣ್ಯ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಆರೋಪಿಸಲಾಗಿದೆ.
ಗಿಡ್ಡಯ್ಯ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘದಲ್ಲಿ ತನ್ನ ಕುಟುಂಬಕ್ಕಾದ ಅನ್ಯಾಯವನ್ನು ತೋಡಿಕೊಂಡಾಗ ಸಂಘದ ಮೂಲಕ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಹಾಸನ ವಿಭಾಗದ ಸಾಮಾಜಿಕ ಅರಣ್ಯ ವಲಯ ಕಚೇರಿಯಲ್ಲಿ 2017ರ ಜನವರಿಗೆ ಉದ್ಯೋಗ ನೀಡಲಾಯಿತು. ಆದರೆ ನಾಲ್ಕು ತಿಂಗಳಾದರೂ ಅವರಿಗೆ ಸಂಬಳ ನೀಡದೇ ಸತಾಯಿಸಲಾಯಿತು. ಕೇಳಿದಾಗ ಅನುದಾನ ಬಂದಾಗ ನೀಡುತ್ತೇವೆ ಎಂಬ ಉಡಾಫೆಯ ಉತ್ತರವನ್ನು ಅಧಿಕಾರಿಗಳು ನೀಡಿದರು. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಕಚೇರಿ ಯಲ್ಲೇ ಇಲ್ಲದ ಪ್ರಶಾಂತಕುಮಾರ್ ಎಂಬವರ ಹೆಸರಿಗೆ 10,043ರೂ. ವೇತನದ ಬಿಲ್‌ನ್ನು ಸರಕಾರಕ್ಕೆ ಸಲ್ಲಿಸಲಾಗುತ್ತಿತ್ತು ಎಂದು ಹೇಮಲತಾ ತಿಳಿಸಿದರು.
ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಮತ್ತೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು.ಹೇಮಲತಾ ನೇರವಾಗಿ ಇಲಾಖೆಯ ಅಧೀನ ಕಾರ್ಯದರ್ಶಿಗೆ ಪತ್ರ ಬರೆದು ನ್ಯಾಯ ಕೇಳಿದಾಗ, ಪ್ರತಿಫಲವಾಗಿ 2017ರ ಸೆಪ್ಟಂಬರ್‌ನಲ್ಲಿ ಕೆಲಸವನ್ನೇ ಕಳೆದುಕೊಳ್ಳಬೇಕಾಯಿತು. ಇದರೊಂದಿಗೆ ಕೆಲಸ ಮಾಡಿದ 9 ತಿಂಗಳ ಸಂಬಳವನ್ನು ಕಳೆದುಕೊಳ್ಳಬೇಕಾಯಿತು. ಗಿಡ್ಡಯ್ಯ ಮತ್ತೆ ಮನವಿ ಮಾಡಿಕೊಂಡಾಗ ನಾಲ್ಕು ತಿಂಗಳ ಸಂಬಳವಾಗಿ 37,530ರೂ. ಚೆಕ್‌ನ್ನು ಕಳುಹಿಸಿಕೊಟ್ಟರು ಎಂದು ಹೇಮಲತಾ ತಿಳಿಸಿದರು.
ಹೀಗೆ ಮೊದಲು ನರಸಿಂಹ ಮೂರ್ತಿ ನಂತರ ಹೇಮಲತಾ ಅವರಿಗೆ ಅರಣ್ಯ ಇಲಾಖೆ ನಿರಂತರ ಅನ್ಯಾಯ ಮಾಡುತ್ತಲೆ ಬಂದಿದೆ. ಇದನ್ನು ಪ್ರಶ್ನಿಸಿದರೆ, ನ್ಯಾಯಬೇಕಿದ್ದರೆ ನ್ಯಾಯಲಯಕ್ಕೆ ಹೋಗಿ ಎಂದು ಅಧಿಕಾರಿಗಳು ಬೀಡುಬೀಸಾಗಿ ಹೇಳುತ್ತಾರೆ. ಎರಡು ಹೊತ್ತಿನ ಊಟಕ್ಕೂ ಇಲ್ಲದ ಈ ಬಡ ಕುಟುಂಬ ನ್ಯಾಯಾಲಯದ ಮೆಟ್ಟಲೇರಲು ಸಾಧ್ಯವೇ ಎಂದು ಡಾ. ಶ್ಯಾನುಭಾಗ್ ಕೇಳುತ್ತಾರೆ. ನಿಜವಾಗಿಯೂ ದಲಿತರಿಗೆ ರಾಜ್ಯದಲ್ಲಿ ನ್ಯಾಯ ಸಿಗುವುದೇ ಎಂದು ಅವರು ಪ್ರಶ್ನಿಸುತ್ತಾರೆ.







