ಮುನ್ಸಿಪಾಲಿಟಿ ಕಟ್ಟಡದ ಮೇಲೆ ಬಿಜೆಪಿಗರಿಂದ ಜೈಶ್ರೀರಾಮ್ ಪೋಸ್ಟರ್: ಅದೇ ಸ್ಥಳದಲ್ಲಿ ತ್ರಿವರ್ಣಧ್ವಜ ಹಾರಿಸಿದ ಡಿವೈಎಫ್ಐ

photo: ndtv.com
ಪಾಲಕ್ಕಾಡ್,ಡಿ.18: ಕೇರಳದ ಪಾಲಕ್ಕಾಡ್ ಪುರಸಭೆಯಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ಪಕ್ಷವು ಜಯಗಳಿಸಿತ್ತು. ಈ ಸಂಭ್ರಮಾಚರಣೆಯ ಭಾಗವಾಗಿ ಮುನ್ಸಿಪಾಲಿಟಿ ಕಟ್ಟಡದ ಮೇಲೆ ‘ಜೈ ಶ್ರೀರಾಮ್’ ಎಂಬ ಬರಹ ಮತ್ತು ಶಿವಾಜಿಯ ಫೋಟೊವಿರುವ ಬೃಹತ್ ಪೋಸ್ಟರ್ ಅನ್ನು ಹಾಕಿ ವೀಡಿಯೋ ಮಾಡಿದ್ದು, ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅದೇ ಕಟ್ಟಡದ ಮೇಲೆ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಹಾಕಿದ್ದ ಸ್ಥಳದಲ್ಲಿಯೇ ಡಿವೈಎಫ್ಐ ಕಾರ್ಯಕರ್ತರು ತ್ರಿವರ್ಣ ಧ್ವಜ ಹಾರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಮುನ್ಸಿಪಾಲಿಟಿ ಕಟ್ಟಡದ ಮೇಲೆ ಶಿವಾಜಿಯ ಚಿತ್ರವಿರುವ ಜೈಶ್ರೀರಾಮ್ ಘೋಷಣೆ ಬರೆಯಲಾದ ಪೋಸ್ಟರ್ ಹಾಗೂ ಬಿಜೆಪಿ ಪಕ್ಷದ ಚಿಹ್ನೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಚಿತ್ರವಿರುವ ಇನ್ನೊಂದು ಪೋಸ್ಟರ್ ಕೂಡಾ ಹಾಕಲಾಗಿತ್ತು. ಇದರ ವೀಡಿಯೋವನ್ನು ಬಿಜೆಪಿ ವಕ್ತಾರ ಸಂದೀಪ್ ವಾರಿಯರ್ ‘ಪಾಲಕ್ಕಾಡ್ ಕೇರಳದ ಗುಜರಾತ್’ ಎಂಬ ತಲೆಬರಹದಡಿ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು. ಈ ವೀಡಿಯೋ ವೈರಲ್ ಆಗಿತ್ತು.
“ಈ ಪ್ರಕರಣವು ಬಿಜೆಪಿ ನಾಯಕರ ಗಮನಕ್ಕೆ ಬಂದಿರಲಿಲ್ಲ. ನಮಗಿದರ ಬಗ್ಗೆ ಅರಿವಿರಲಿಲ್ಲ. ಇನ್ನು ಇದರಲ್ಲಿ ತಪ್ಪೇನಾದರೂ ಇದೆಯೇ? ಈ ಕುರಿತು ನಾವ್ಯಾರೂ ಕ್ಷಮೆ ಕೇಳುವ ಅಗತ್ಯವೇ ಇಲ್ಲ. ನಾವು ಭಾರತದಲ್ಲಿ ಜೈಶ್ರೀರಾಮ್ ಅನ್ನದೇ, ಪಾಕಿಸ್ತಾನದಲ್ಲಿ ಹೇಳೋದಕ್ಕಾಗುತ್ತದೆಯೇ?” ಎಂದು ಪಾಲಕ್ಕಾಡ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಡ್ವೊಕೇಟ್ ಕೃಷ್ಣಕುಮಾರ್ ಕೆ.ವಿ ಹೇಳಿಕೆ ನೀಡಿದ್ದಾರೆಂದು ndtv.com ವರದಿ ಮಾಡಿದೆ.
ಸಾಮಾಜಿಕಕ ತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಡಿವೈಎಫ್ಐ ಸಂಘಟನೆಗೆ ಸೇರಿದ ಕೆಲ ಯುವಕರು ಅದೇ ಕಟ್ಟಡದ ಮೇಲೆ ಹತ್ತಿ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಇಳಿಯಬಿಟ್ಟಿದ್ದ ಸ್ಥಳದಲ್ಲಿಯೇ ತ್ರಿವರ್ಣ ಧ್ವಜ ಹಾರಿಸಿದ್ದು, ಜೊತೆಗೆ ಬಿಜೆಪಿ ವಿರುದ್ಧ ಘೋಷಣೆಗಳನ್ನೂ ಕೂಗಿದ್ದಾರೆ. “ಉತ್ತರ ಭಾರತದ ಹಲವು ಸ್ಥಳಗಳಲ್ಲಿ ಕೇಸರಿ ಬಣ್ಣ ಬಳಿಯಲಾಗಿದೆ. ಶಿವಾಜಿ, ಗೋಳ್ವಲ್ಕರ್ ಫೋಟೊಗಳನ್ನು ಹಾಕಲಾಗಿದೆ. ಆದರೆ ಇದು ಕೇರಳ. ಇಲ್ಲಿನ ಜನತೆ ಜಾತ್ಯತೀತರು. ಸರಕಾರಿ ಕಟ್ಟಡಗಳ ಮೇಲೆ ಧಾರ್ಮಿಕ ಚಿಹ್ನೆಗಳನ್ನು ಹಾಕಲು ನಾವು ಬಿಡುವುದಿಲ್ಲ. ಅದು ಬಹುಸಂಖ್ಯಾತರಾದರೂ ಸರಿ, ಅಲ್ಪಸಂಖ್ಯಾತರಾದರೂ ಸರಿ. ಪ್ರಜಾಫ್ರಭುತ್ವದ ಕಣ್ಣಲ್ಲಿ ಎಲ್ಲರೂ ಒಂದೇ ಎಂದು ಡಿವೈಎಫ್ಐ ಮುಖಂಡ ಟಿ.ಎಮ್. ಶಶಿ ಹೇಳಿಕೆ ನೀಡಿದ್ದಾಗಿ thenewsminute.com ವರದಿ ಮಾಡಿದೆ.







