ಹೊಟ್ಟೆಕಿಚ್ಚಿನಿಂದ ನಮ್ಮ ಪಕ್ಷದವರೇ ನನ್ನನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿದರು: ಸಿದ್ದರಾಮಯ್ಯ
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು ?

ಮೈಸೂರು,ಡಿ.18: ನಾನು ಐದು ವರ್ಷ ಸಂಪೂರ್ಣವಾಗಿ ಜನಪ್ರಿಯ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದನ್ನು ಸಹಿಸಿಕೊಳ್ಳಲಾಗದೆ ಹೊಟ್ಟೆಕಿಚ್ಚಿನಿಂದ ನಮ್ಮ ಪಕ್ಷದವರೂ ಸೇರಿದಂತೆ ಎಲ್ಲರೂ ಸೇರಿ ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ಅರವಿಂದ ನಗರದಲ್ಲಿರುವ ಶ್ರೀಕಾಲಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದ “ಗ್ರಾಮ ಜನಾಧಿಕಾರ” ಸಮಾವೇಶ ಉದ್ಘಾಟಿಸಿ ನಂತರ ಮಾತನಾಡಿದರು. ದಿ.ಡಿ.ದೇವರಾಜು ಅರಸು ನಂತರ ಐದು ವರ್ಷ ಸಂಪೂರ್ಣವಾಗಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದು ನಾನೇ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬಿಡುತ್ತೇನೆ ಎಂದು ನಮ್ಮ ಪಕ್ಷದ ಕೆಲವರು ಮತ್ತು ಬಿಜೆಪಿ ಜೆಡಿಎಸ್‍ನವರು ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ಸೋಲಿಸಿ ಬಿಟ್ಟರು ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಎಸ್.ಆರ್.ಬೊಮ್ಮಾಯಿ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ವೀರಪ್ಪ ಮೋಯ್ಲಿ, ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಸೇರಿದಂತೆ ಯಾರೂ ಐದು ವರ್ಷ ಸಂಪೂರ್ಣವಾಗಿ ಆಡಳಿತ ನಡೆಸಲಿಲ್ಲ. ನಾನು ಐದು ವರ್ಷ ಜನಪ್ರಿಯ ಮುಖ್ಯಮಂತ್ರಿಯಾಗಿ ಒಳ್ಳೆಯ ಯೋಜನೆಗಳನ್ನು ನೀಡಿದೆ. ಅದನ್ನು ಸಹಿಸಿಕೊಳ್ಳಲಾಗದೆ ಹೊಟ್ಟೆ ಕಿಚ್ಚಿನಿಂದ, ಈತ ಗೆದ್ದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬಿಡುತ್ತಾನೆ ಎಂದುಕೊಂಡು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಳ ಒಪ್ಪಂದ ಮಾಡಿಕೊಂಡು ಸೋಲಿಸಿ ಬಿಟ್ಟರು ಎಂದು ಆರೋಪಿಸಿದರು.
ನನಗೆ ರಾಜಕೀಯ ಜನ್ಮ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ನನ್ನ ರಾಜಕೀಯದ ಕೊನೆ ಗಳಿಗೆಯನ್ನು ಈ ಕ್ಷೇತ್ರದಿಂದಲೇ ನಿವೃತ್ತಿಗೊಳಿಸಬೇಕು ಎಂದು ತೀರ್ಮಾನಿಸಿ ಚುನಾವಣೆಗೆ ಸ್ಪರ್ಧೆ ಮಾಡಿದೆ. ಆದರೆ ಒಳಸಂಚು ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಸೋಲಿಸಿಬಿಟ್ಟರು. ಒಂದು ವೇಳೆ ಬಾದಾಮಿ ಕ್ಷೇತ್ರದ ಜನ ನನ್ನನ್ನು ಕೈ ಹಿಡಿಯಲಿಲ್ಲ ಎಂದರೆ ನನ್ನ ಭವಿಷ್ಯ ಏನಾಗುತ್ತಿತ್ತು ? ನಾಡಿನ ಜನರ ಪರಿಸ್ಥಿತಿ ಏನಾಗುತ್ತಿತ್ತು ? ನನ್ನ ರಾಜಕೀಯ ಮಂಕಾಗಿ, ಕತ್ತಲಾಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಜನ 2006ರಲ್ಲಿ ನನ್ನ ಕೈ ಹಿಡಿದು ಬೆಳೆಸಿದರು. ಆ ಋಣ ತೀರಿಸಲೆಂದೇ ಮತ್ತೆ ಸ್ಪರ್ಧೆ ಮಾಡಿದೆ. ಆದರೆ ನನ್ನನ್ನು ಸೋಲಿಸಿಬಿಟ್ಟರು. ಇಷ್ಟೊಂದು ಮತಗಳ ಅಂತರದಿಂದ ಸೋಲುತ್ತೇನೆ ಅಂದುಕೊಂಡಿರಲಿಲ್ಲ. ಜನ ಪ್ರೀತಿ ತೋರಿಸಿದರು ಆದರೆ ಓಟ್ ಹಾಕಲಿಲ್ಲ. ಮುಂದೆ ನಾನು ಚುನಾವಣೆಗೆ ನಿಲ್ಲುತ್ತೇನೊ ಇಲ್ಲವೋ, ಆದರೆ ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ನಾನು ಸೋತೆ ಎಂದು ನನಗೆ ಬೇಸರ ಆಗಲಿಲ್ಲ. ಆದರೆ ನಮ್ಮ ಕಾರ್ಯಕರ್ತರು ನನಗೆ ಗೆದ್ದೇ ಗೆಲ್ಲುತ್ತೀರಿ ಎಂದು ಸುಳ್ಳು ಹೇಳಿದರು. ಈ ಆಘಾತವನ್ನು ನನಗೆ ತಡೆದುಕೊಳ್ಳಲು ಆಗಲಿಲ್ಲ. ಪಕ್ಷಕ್ಕೆ ಮೋಸ ಮಾಡಿದ ಯಾರೂ ಪಕ್ಷದಲ್ಲಿ ಇರುವುದು ಬೇಡ. ಅವರೆಲ್ಲ ಹೊರಗೆ ಹೋದರೆ ಒಳ್ಳೆಯದು. ಪಕ್ಷಕ್ಕೆ ಮೋಸ ಮಾಡಿದವರು ಹೆತ್ತ ತಾಯಿಗೆ ಮೋಸ ಮಾಡಿದ ಹಾಗೆ. ಯಾವುದೇ ರಾಜಕೀಯ ಪಕ್ಷಕ್ಕೆ ವ್ಯಕ್ತಿ ಮುಖ್ಯ ಅಲ್ಲ, ವ್ಯಕ್ತಿಗೆ ಪಕ್ಷ ಅನಿವಾರ್ಯ ಎಂದು ಹೇಳಿದರು.
ಕುಮಾರಸ್ವಾಮಿ ಸಿಎಂ ಆಗಲು ಬಿಡುತ್ತಿರಲಿಲ್ಲ: ನಾನು ಸಮ್ಮಿಶ್ರ ಸರ್ಕಾರವನ್ನು ಬೀಳಿಸಬೇಕು ಅಂದಿದ್ದರೆ ಕುಮಾರಸ್ವಾಮಿಯನ್ನು ಸಿಎಂ ಆಗೋಕೆ ಬಿಡುತ್ತಿರಲಿಲ್ಲ. ನಾನು ಕುಮಾರಸ್ವಾಮಿ ಬೇಡ ಎಂದು ಹಠ ಹಿಡಿದು ಕೂತಿದ್ದರೆ ಕುಮಾರಸ್ವಾಮಿ ಸಿಎಂ ಆಗುತ್ತಿದ್ದರೇ ? ತಾಜ್‍ವೆಸ್ಟೆಂಡ್ ಹೊಟೇಲ್ ನಲ್ಲಿ ಕುಳಿತು ಆಡಳಿತ ನಡೆಸಿದ್ದರಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು.
ಶಾಸಕರಿಗೆ ಸೂಕ್ತವಾಗಿ ಸ್ಪಂದಿಸಿದ್ದರೆ ನಮ್ಮ ಶಾಸಕರು ಬಿಜೆಪಿ ಪಕ್ಷಕ್ಕೆ ಹೋಗುತ್ತಿರಲಿಲ್ಲ. ಕುಣಿಯಲಾರದವಳು ನೆಲ ಡೋಂಕು ಅಂದಹಾಗೆ ಕುಮಾರಸ್ವಾಮಿ ಮಾತನಾಡುತ್ತಾರೆ. ಒಂದು ಕಡೆ ನನಗೆ ಸರ್ಕಾರ ಬೀಳುತ್ತೆ ಅಂತ ಗೊತ್ತಿತ್ತು. ಅದಕ್ಕೆ ಫಾರಿನ್ ಗೆ ಹೋದೆ ಅಂತಾನೆ. ಇನ್ನೊಂದು ಕಡೆ ಸಿದ್ದರಾಮಯ್ಯ ಬೀಳಿಸಿದ ಅಂತಾನೆ. ಇವನಿಗೆ ರಾಜಕೀಯ ಪ್ರಬುದ್ಧತೆ ಇದೆಯೇ. ಎಂಎಲ್‍ಎ ಗಳನ್ನು ಸರಿಯಾಗಿ ನಡೆಸಿಕೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಏಕವಚನದಲ್ಲೇ ಕಿಡಿಕಾರಿದರು.
ಲಂಚ ಪಡೆಯುತ್ತಿರುವ ವಿಜಯೇಂದ್ರ: ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಳ್ಳುತ್ತಿದ್ದರು. ಆದರೆ ಅವರ ಮಗ ವಿಜಯೇದ್ರ ಆರ್.ಟಿ.ಜಿ.ಎಸ್ ಮುಖಾಂತರ ತೆಗೆಯುತ್ತಾನೆ. ಸುಮಾರು 7 ಕೋಟಿ 40 ಲಕ್ಷ ಹಣ ತೆಗೆದುಕೊಂಡಿದ್ದಾನೆ. ರಾಜ್ಯದಲ್ಲಿ ಲೂಟಿ ಹೊಡೆಯುವ ಕೆಲಸ ಆಗ್ತಿದೆ. ಆರ್.ಟಿ.ಜಿ.ಎಸ್ ಮೂಲಕ ಮೂಲಕ ದುಡ್ಡು ತೆಗೆಯುವವನಿಗೆ ಜೈಕಾರ ಹಾಕುತ್ತಾರೆ. ಹೀಗೆ ಆದರೆ ಸಮಾಜ ಉಳಿಯುತ್ತಾ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಸೆಗಣಿ ಎತ್ತಿದ್ದಾರ ?: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಡಕಲು, ವಯಸ್ಸಾದ ಹಸುಗಳನ್ನ ರೈತರು ಏನು ಮಾಡಬೇಕು. ಇದನ್ನು ಪ್ರಶ್ನಿಸಿದರೆ ಅಶೋಕ್ 'ನಮ್ಮ ಮನೆಗೆ ಕಳಿಸಿ' ಎಂದು ಹೇಳುತ್ತಾರೆ. ಗೋಮಾತೆ ಪೂಜೆ ಮಾಡುವ ಬಿಜೆಪಿ ನಾಯಕರು ಸಗಣಿ ಎತ್ತಿದ್ದಾರಾ ? ಮೇಯಿಸಿ, ಹುಲ್ಲು ಹಾಕಿ ಹಾಲು ಕರೆದು ಡೈರಿಗೆ ಹಾಕಿದ್ದಾರಾ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.
ನಾಳೆಯಿಂದಲೇ ಕಾರ್ಯಪ್ರವೃತ್ತರಾಗಿ
ಗ್ರಾ.ಪಂ ಚುನಾವಣೆ ಬಗ್ಗೆ ಕಾರ್ಯಕರ್ತರಿಗೆ ಕರೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸೋಲಿಸಬೇಕು ಎಂದರೆ ಒಬ್ಬೊಬ್ಬರು ಮಾತ್ರ ಚುನಾವಣೆಗೆ ನಿಲ್ಲಬೇಕು. ನೀವೆ ಮೂರು ಮೂರು ಜನ ಚುನಾವಣೆಗೆ ನಿಲ್ಲಬೇಡಿ. ನಮ್ಮ ಕಾರ್ಯಕರ್ತರು ಈ ಬಗ್ಗೆ ಗಮನ ಹರಿಸಬೇಕು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಸೂಚಿಸಿದರು.
ಸಮಾವೇಶದಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕಾಂಗ್ರೆಸ್ ಮುಖಂಡರಾದ ಕೆ.ಮರೀಗೌಡ, ಗುರುಪಾದಸ್ವಾಮಿ, ಹುಲ್ಲಹಳ್ಳಿ ಬಸವರಾಜು, ಹರೀಶ್ ಗೌಡ, ಮಂಜುಳಾ ಮಾನಸ, ಜಿ.ಪಂ.ಸದಸ್ಯರುಗಳಾದ ರಾಕೇಶ್ ಪಾಪಣ್ಣ, ಲತಾ ಸಿದ್ದಶೆಟ್ಟಿ, ಮಾಜಿ ಜಿ.ಪಂ.ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಕೋಟೆ ಹುಂಡಿ ಮಹದೇವ್, ಮಂಜೇಗೌಡ, ಶಿವು, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಮ್ಮ 40 ವರ್ಷ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆದಿ ಏಕೈಕ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಹಗರಣಗಳಿಗೆ ಸಿಲುಕದೆ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನಿಮ್ಮೆಲ್ಲರ ಸಹಕಾರ ಅಗತ್ಯ.
-ಆರ್.ಧ್ರುವನಾರಾಯಣ್, ಮಾಜಿ ಸಂಸದಎಲ್ಲ ಪಕ್ಷವನ್ನು ತಿರುಗಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ಬರಲು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಎಡತಾಕುತ್ತಿದ್ದಾರೆ. ಎಲ್ಲಿ ತಮಗೆ ಅನುಕೂಲವಾಗುತ್ತದೊ ಅಲ್ಲಿಗೆ ಹೋಗುವ ಪ್ರಯತ್ನವನ್ನು ಮಾಡುತ್ತಾರೆ. ಹಾಗಾಗಿ ನೀವೆಲ್ಲರೂ ಎಚ್ಚರಿಕೆಯಿಂದ ಇದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಪಡೋಣ.
-ಕೆ.ವೆಂಕಟೇಶ್, ಮಾಜಿ ಸಚಿವ.







