ದ.ಕ.: ಅಕ್ರಮ ಗಣಿಗಾರಿಕೆ ಬಗ್ಗೆ ವರದಿಗೆ ಉಪ ಲೋಕಾಯುಕ್ತ ಸೂಚನೆ
ಮಂಗಳೂರು, ಡಿ.18: ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿ ಸಾರ್ವಜನಿಕರಿಂದ ಬಂದಿರುವ ಇಲ್ಲಿಯವರೆಗಿನ ದೂರು ಹಾಗೂ ಅದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿಸ್ತೃತ ವರದಿಯನ್ನು ಲೋಕಾಯುಕ್ತಕ್ಕೆ ನೀಡುವಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಗ್ರಾಮ ಪಂಚಾಯತ್‌ನ ಆಡಿಟ್‌ನ ವಿಚಾರಕ್ಕೆ ಸಂಬಂಧಿಸಿ 2 ತಿಂಗಳ ಒಳಗೆ ಸಮಿತಿಯ ಸಭೆ ನಡೆಸಿ ವಿವರವಾದ ವರದಿ ಯನ್ನು ಲೋಕಾಯುಕ್ತಕ್ಕೆ ನೀಡುವಂತೆ ತಾಲೂಕು ಇಓ ಅವರಿಗೆ ಸೂಚಿಸಿದರು. ತಪ್ಪಿತಸ್ಥ ಪಿಡಿಓಗಳ ವಿರುದ್ಧ ಲೋಕಾಯುಕ್ತದಿಂದ ಕ್ರಮ ಕೈಗೊಳ್ಳಾಗುವುದು ಎಂದವರು ಹೇಳಿದರು.
ಮಂಗಳೂರು ಪಾಲಿಕೆ, ಗ್ರಾಮೀಣಾಭಿವೃದ್ಧಿ, ಕಂದಾಯ, ಆರೋಗ್ಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಂದ ವ್ಯಕ್ತವಾ ಗಿರುವ ದೂರುಗಳು ಬಾಕಿಯಾಗಿರುವ ಕುರಿತು ಸಂಬಂಧಿಸಿದ ಇಲಾಖೆಯು ಸಮಗ್ರ ವರದಿಯನ್ನು ನಿಗದಿತ ಸಮಯದೊಳಗೆ ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ದೂರಿಗೆ ಸಂಬಂಧಿಸಿ ಸಾರ್ವಜನಿಕರ ಸಮಸ್ಯೆ ಗಳಿಗೆ ಸಂಬಂಧಿಸಿ ಲೋಕಾಯುಕ್ತದಿಂದಲೇ ಸ್ವಯಂ ಪ್ರೇರಿತವಾಗಿ ಪವಿಚಾರಣೆ ನಡೆಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಅನಧಿಕೃತ ಮರಳುಗಾರಿಕೆ ಹಾಗೂ ಅಕ್ರಮ ಕೆಂಪು ಕಲ್ಲು ಸಾಗಾಟ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು, ಇದನ್ನು ಮಟ್ಟಹಾಕಲು ವಿಶೇಷ ನಿಗಾ ವಹಿಸಲಾಗುತ್ತಿದೆ. ಇದಕ್ಕಾಗಿ ಗ್ರಾ.ಪಂಚಾಯತ್‌ನಲ್ಲಿ ಟಾಸ್ಕ್‌ಪೋರ್ಸ್ ರಚಿಸಲಾಗಿದೆ. ಅಡ್ಡಹೊಳೆ-ಬಿ.ಸಿರೋಡ್ ರಸ್ತೆಗೆ ಭೂಸ್ವಾಧೀನ ಪೂರ್ಣವಾಗಿದ್ದು, ಜನವರಿಯಲ್ಲಿ ಟೆಂಡರ್ ಆಗಲಿದೆ. ಕಾರ್ಕಳ-ಮಂಗಳೂರು ರಸ್ತೆಯ ಭೂಸ್ವಾಧೀನ ನಡೆಯುತ್ತಿದೆ ಎಂದರು.
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಪಚ್ಚನಾಡಿಯ ತ್ಯಾಜ್ಯ ಮಂದಾರದಲ್ಲಿ ಜರಿದು ಸಮಸ್ಯೆಯಾಗಿತ್ತು. ಜರಿದು ಬಿದ್ದಿರುವ ತ್ಯಾಜ್ಯವನ್ನು ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ತಯಾರಿ ಅಥವಾ ಸಿಎನ್‌ಜಿ ಉತ್ಪಾದಿಸುವ ಬಗ್ಗೆ ಪ್ರಸ್ತಾವನೆಯಿದೆ ಎಂದರು.
ಪಚ್ಚನಾಡಿ ತ್ಯಾಜ್ಯ ದುರಂತದ ಕಾರಣದಿಂದ ಇನ್ನು ಮುಂದೆ ಮಂಗಳೂರಿನ ತ್ಯಾಜ್ಯವನ್ನು ನಗರದ ನಾಲ್ಕು ಕಡೆಗಳಲ್ಲಿ ಪ್ರತ್ಯೇಕವಾಗಿ ವಿಭಜಿಸಿ ನಿರ್ವಹಣೆ ಮಾಡಲು ಈಗಾಗಲೇ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಪ್ರತಿಕ್ರಿಯಿಸಿ, ತ್ಯಾಜ್ಯದಿಂದ ಜನರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆಯನ್ನು ಸ್ಥಳೀಯ ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಕಾಡದಂತೆ ಗಂಭೀರ ಎಚ್ಚರಿಕೆ ಅಗತ್ಯ ಎಂದು ಸೂಚಿಸಿದರು.
ಕಾಲ ಕಾಲಕ್ಕೆ ನಿಗದಿತ ಕಡತವನ್ನು ನಿರ್ವಹಣೆ ಮಾಡುವ ಕಲೆಯನ್ನು ಎಲ್ಲಾ ಅಧಿಕಾರಿಗಳು ಮೈಗೂಡಿಸಿಕೊಳ್ಳಬೇಕು. ಇದಕ್ಕಾಗಿ ಡೆಡ್‌ಲೈನ್ ಪರಿಕಲ್ಪನೆಯನ್ನು ಜಾರಿಗೊಳಿಸಬೇಕು. ನಿಯಮ ಉಲ್ಲಂಸುವ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸಮನ್ಸ್ ಹೊರಡಿಸಲಾಗುವುದು
ನ್ಯಾ. ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತರು.