11 ವಾರಗಳ ಬಳಿಕ ಭಾರತ-ಚೀನಾ ರಾಜತಾಂತ್ರಿಕ ಮಾತುಕತೆ ಪುನಾರಂಭ
ಗಡಿಯಿಂದ ಉಭಯದೇಶಗಳ ಸೇನಾ ವಾಪಾಸಾತಿ ಬಗ್ಗೆ ಚರ್ಚೆ ಸಾಧ್ಯತೆ

ಬೀಜಿಂಗ್,ಡಿ.18: ಲಡಾಕ್ ಗಡಿಯಲ್ಲಿ ಉಭಯದೇಶಗಳ ಭುಗಿಲೆದ್ದಿರುವ ಸೇನಾಉದ್ವಿಗ್ನತೆಯನ್ನು ಶಮನಗೊಳಿಸಲು ನಡೆಯುತ್ತಿರುವ ಮಾತುಕತೆಯು ಹನ್ನೊಂದು ವಾರಗಳ ಸುದೀರ್ಘ ಅಂತರದ ಬಳಿಕ ಭಾರತ-ಚೀನಾ ರಾಜತಾಂತ್ರಿಕ ಮಾತುಕತೆಗಳನ್ನು ಶುಕ್ರವಾರ ಪುನರಾರಂಭಿಸಿವೆ.
ಗಡಿ ವ್ಯವಹಾರಗಳ ಕುರಿತ ಸಮಾಲೋಚನೆ ಹಾಗೂ ಸಮನ್ವಯ ಸಮಿತಿಗಾಗಿನ ಕಾರ್ಯತಂತ್ರದಡಿ ಉಭಯದೇಶಗಳ ರಾಜತಾಂತ್ರಿಕರು ವಿಡಿಯೋಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿವೆ. ಮಾತುಕತೆಯ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಶೂನ್ಯಕ್ಕಿಂತಲೂ ಕಡಿಮೆ ಉಷ್ಣಾಂಶದಲ್ಲಿಯೂ ನೈಜ ನಿಯಂತ್ರಣ ರೇಖೆಯ ಇಕ್ಕೆಲಗಳಲ್ಲಿ ಬೀಡುಬಿಟ್ಟಿರುವ ಸಾವಿರಾರು ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದಿನ ಡಬ್ಲು ಎಂಸಿಸಿ ಸಭೆಯು ಸೆಪ್ಟೆಂಬರ್ 30ರಂದು ನಡೆದಿತ್ತಾದರೂ, ಸೇನಾ ವಾಪಾಸಾತಿಯ ಕುರಿತಾದ ಮಾತುಕತೆಗಳನ್ನು ಮುಂದಕ್ಕೊಯ್ಯಲು ಆಗ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಎಲ್‌ಎಸಿಯ ಎಲ್ಲಾ ಸಂಘರ್ಷಾತ್ಮಕ ಕೇಂದ್ರಗಳಿಂದ ಸಂಪೂರ್ಣವಾಗಿ ಸೇನಾ ಹಿಂತೆಗೆತದ ಬಗ್ಗೆ ಇಬ್ಬರಿಗೂ ಸ್ವೀಕಾರಾರ್ಹವಾದ ಪರಿಹಾರವನ್ನು ರೂಪಿಸುವ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕೆಂದು ಭಾರತವು ಗುರುವಾರ ಚೀನಾಗೆ ಕರೆ ನೀಡಿತ್ತು.





