ಉಡುಪಿ: ಬನ್ನಂಜೆ ಗೋವಿಂದಾಚಾರ್ಯರಿಗೆ ನುಡಿನಮನ

ಉಡುಪಿ, ಡಿ.18:ಬನ್ನಂಜೆ ಗೋವಿಂದಾಚಾರ್ಯರು ಯಾವುದೇ, ಯಾರದೇ ಪ್ರಭಾವಕ್ಕೆ ಒಳಗಾಗದೆ ತತ್ವ ಮತ್ತು ಸತ್ಯವನ್ನು ತಿಳಿಯಲು ಒಳ ಗಣ್ಣು ತೆರೆದು ಸಾಗಿದ್ದರಿಂದ ಅವರ ವ್ಯಕ್ತಿತ್ವ ಬೆಳೆಯಲು ಸಾಧ್ಯವಾಗಿದೆ. ಅವರು ಪಂಡಿತ, ಕವಿ ಮಾತ್ರವಲ್ಲದೆ ಸತ್ಯಾನ್ವೇಷಕ ಸಹ ಆಗಿದ್ದರು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ಸಂಜೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ನಿಧನರಾದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾ ಚಾರ್ಯರಿಗೆ ಹಮ್ಮಿಕೊಳ್ಳಲಾದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡು ತಿದ್ದರು.
ಮಾತು, ಕೃತಿ ಮತ್ತು ಆಚರಣೆಯಲ್ಲಿ ಒಂದೇ ತೆರನಾಗಿದ್ದ ಬನ್ನಂಜೆ ಯಾರನ್ನೂ ಮೆಚ್ಚಿಸಲು ಸತ್ಯವನ್ನು ತಿರುಚಿ ಹೇಳುತ್ತಿರಲಿಲ್ಲ. ಸತ್ಯವನ್ನು ನಿಷ್ಠುರವಾಗಿ ಹೇಳುವ ಧೈರ್ಯ ಅವರಿಗೆ ಒಲಿದಿತ್ತು. ಈ ಕಾರಣದಿಂದ ತ್ರಿಕರಣ ಪೂರ್ವಕ ತತ್ವಬದ್ಧ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.
ಬನ್ನಂಜೆ ವಿಚಾರಧಾರೆ ಪಾಶ್ಚಿಮಾತ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ವಿಶ್ವಾದ್ಯಂತ ಮಧ್ವ ತತ್ವಶಾಸ್ತ್ರದ ಜಾಗೃತಿ ಮೂಡಿಸಿದ್ದಾರೆ. ಅವರಿಲ್ಲ ದಿದ್ದರೂ ಪ್ರವಚನ, ಕೃತಿಗಳ ಮೂಲಕ ಜೀವಂತವಾಗಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ನಡೆಯಬೇಕು. ಸರಕಾರ ಬನ್ನಂಜೆ ಪ್ರತಿಷ್ಠಾನ ಸ್ಥಾಪಿಬೇಕು ಎಂದವರು ಒತ್ತಾಯಿಸಿದರು.
ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಸಂಶೋಧನೆ, ಪಾಂಡಿತ್ಯ, ಸೃಜನಶೀಲತೆ ಮೂರರ ಅಪೂರ್ವ ಸಂಗಮ ಬನ್ನಂಜೆ. ಇವೆಲ್ಲವೂ ಅವರೊಳಗೆ ಪರಸ್ಪರ ಸ್ಪರ್ಧಿಸುತ್ತಿವೆಯೋ ಎಂಬಂತೆ ನಮ್ಮನ್ನು ಬೆರಗುಗೊಳಿಸಿದ್ದರು. ಶಾಸ್ತ್ರಗಳೇ ಅವರನ್ನು ಅನುಸರಿಸುತ್ತಿವೆಯೋ ಎಂಬಂತೆ ಬದುಕಿದವರು. ಸಂಸ್ಕೃತ ಶ್ಲೋಕಗಳಿಗೆ ಸಮಾನಾರ್ಥವಾಗಿ ಅಚ್ಚಕನ್ನಡದ ಪದಗಳನ್ನು ಬಳಸುತ್ತಿದ್ದ ಅವರ ಪ್ರತಿಭೆ ವಿಶಿಷ್ಟವಾಗಿದೆ. ಅವರೊಬ್ಬ ಉತ್ತಮ ಚಿತ್ರಕಾರರಾಗಿದ್ದರೂ ಪ್ರವಚನ, ಸಾಹಿತ್ಯ, ಗ್ರಂಥ ರಚನೆ ಮಧ್ಯೆ ಈ ಕಲೆ ಮರೆಯಾಗಿ ಹೋಯಿತು ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಮಕಾಲೀನ ಸಮಾಜದಲ್ಲಿ ಬನ್ನಂಜೆ ಅವರಿಗೆ ಸಮಾನರಿರಲಿಲ್ಲ. ಅವರ ವ್ಯಕಿತ್ವ ಮತ್ತು ಕೃತಿ ಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದಾಖಲೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಶಾಸಕ ರಘುಪತಿ ಭಟ್, ವಿದ್ವಾನ್ ರಾಮನಾಥ ಆಚಾರ್ಯ, ಹೆರ್ಗ ರವೀಂದ್ರ ಭಟ್ ನುಡಿನಮನ ಸಲ್ಲಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಪ್ರಸ್ತಾವನೆ ಮಾಡಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.







