ಡಿವೈಎಸ್ಪಿ ಲಕ್ಷ್ಮಿ ಸಾವಿನ ಸಮಗ್ರ ತನಿಖೆಗೆ ಸಂಸದೆ ಶೋಭಾ ಆಗ್ರಹ
ಉಡುಪಿ, ಡಿ.18: ಅಪರಾಧ ತನಿಖಾ ದಳದ ಡಿವೈಎಸ್ಪಿ ಆಗಿದ್ದ ವಿ. ಲಕ್ಷ್ಮಿ ಅವರ ನಿಗೂಢ ಸಾವಿನ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗ ಪಡಿಸುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಿಲ್ಲೆಯಲ್ಲಿ 130ಕ್ಕೂ ಅಧಿಕ ಗ್ರಾಪಂಗಳಲ್ಲಿ ಬಹುಮತ ಪಡೆಯುವ ವಿಶ್ವಾಸ ನಮಗಿದೆ ಎಂದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿ ನಡೆದಿರುವ ಪ್ರತಿಭಟನೆಯ ಹಿಂದೆ ಕೇಂದ್ರ ಸರಕಾರವನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುವ ರಾಜಕೀಯ ಪಕ್ಷಗಳ ಕೈವಾಡವಿದೆ ಎಂದು ಆರೋಪಿಸಿದರು. ಇದೊಂದು ಡೋಂಗಿತನದ ಹೋರಾಟವಾಗಿದ್ದು, ಇದರಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಇಬ್ಬಗೆ ನೀತಿ ಕಂಡುಬರುತ್ತದೆ ಎಂದರು.
ಈ ಮಸೂದೆಯನ್ನು ಸಂಸತ್‌ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಚರ್ಚಿಸಿ ಅಂಗೀಕರಿಸಲಾಗಿದೆ. ಈಗ ಇವರೆಲ್ಲರೂ ದೇಶದ ಜನರೆದುರು ನಾಟಕವಾಡುತಿದ್ದಾರೆ ಎಂದು ಶೋಭಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರ್ ನವೀನ್ ಶೆಟ್ಟಿ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಗುರುಪ್ರಸಾದ್ ಉಪಸ್ಥಿತರಿದ್ದರು.







