ಕನ್ನಡ ವಿವಿಗೆ ಅಗತ್ಯ ಅನುದಾನ ಕೂಡಲೇ ಬಿಡುಗಡೆ ಮಾಡಿ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ
ಕರವೇ ವತಿಯಿಂದ ಕನ್ನಡ ವಿವಿ ಉಳಿಸಿ ಟ್ವಿಟರ್ ಅಭಿಯಾನ
ಬೆಂಗಳೂರು, ಡಿ.18: ರಾಜ್ಯ ಸರಕಾರ ಹೊಸಪೇಟೆಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿ, ಸಂಶೋಧನಾ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಬೇಕೆಂದು ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವುದು ಸೇರಿದಂತೆ ವಿಶ್ವವಿದ್ಯಾಲಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಆಯೋಜಿಸಿದ್ದ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ಕನ್ನಡ ವಿವಿಯ ಸಂಬಂಧಿಸಿದ ಅಧಿಕಾರಿಗಳು ಸರಕಾರದೊಂದಿಗೆ ಸಂವಹನ ನಡೆಸಿ ಅಗತ್ಯ ಅನುದಾನವನ್ನು ಪಡೆದುಕೊಳ್ಳಬೇಕೆಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಸಂಶೋಧನೆ, ಬೋಧನೆಗೆ ಸಂಬಂಧಿಸಿದ ಅನುದಾನವು ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ಕನ್ನಡ ವಿವಿ ನ್ಯಾಕ್ ಗುಣಮಟ್ಟದಲ್ಲಿ ಎ+ ಇದ್ದ ಶ್ರೇಣಿ ಮೂರು ಮೆಟ್ಟಿಲು ಕೆಳಗಿಳಿದು ಬಿ ಶ್ರೇಣಿಗೆ ಇಳಿದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕಕ್ಕೆ ಇರುವುದು ಒಂದೇ ಕನ್ನಡ ವಿಶ್ವವಿದ್ಯಾಲಯ. ಕನ್ನಡ ನಾಡು, ನುಡಿ, ಸಾಹಿತ್ಯ, ಜನಪದ, ಮಹಿಳೆ, ಚರಿತ್ರೆ, ಪುರಾತತ್ತ್ವ, ಬುಡಕಟ್ಟು, ಹಸ್ತಪ್ರತಿ, ಮಾನವಶಾಸ್ತ್ರ, ಸಂಗೀತ. ಹೀಗೆ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ಸಂಶೋಧನೆ ನಡೆಸಲು ಇರುವ ವಿಶ್ವವಿದ್ಯಾಲಯವಿದು. ಇದನ್ನು ಉಳಿಸಿ, ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರಕಾರದೊಂದಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರ ಒಂದಾದ ಮೇಲೊಂದರಂತೆ ಜಾತಿ, ಭಾಷಾ ಪ್ರಾಧಿಕಾರ, ನಿಗಮ ಮಂಡಳಿಗಳನ್ನು ರಚಿಸುತ್ತಿದೆ. ಅವುಗಳಿಗೆ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಕನ್ನಡಿಗರಿಗೆ ಸಂಬಂಧವೇ ಇಲ್ಲದ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರಾರು ಕೋಟಿ ರುಪಾಯಿಗಳನ್ನು ಕೊಟ್ಟಿದೆ. ಆದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಲು ಹಣವಿಲ್ಲವೆಂದರೆ ಏನರ್ಥವೆಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಕುಲತಿ ಪ್ರೊ..ಸ.ಚಿ.ರಮೇಶ್ ರಾಜ್ಯ ಸರಕಾರದಿಂದ ಅನುದಾನಗಳನ್ನು ತರಲು ವಿಫಲರಾಗಿದ್ದಾರೆ. ಬಿ ಶ್ರೇಣಿಗೆ ಇಳಿದ ಪರಿಣಾಮವಾಗಿ ಯುಜಿಸಿಯಿಂದ ಬರುವ ಅನುದಾನಗಳೂ ನಿಂತುಹೋಗಿದೆ. ಕುಲಪತಿಗಳು, ಕುಲಸಚಿವರೇ ಅಸಹಾಯಕತೆ ಪ್ರದರ್ಶಿಸುತ್ತಿರುವುದರಿಂದ ಅರಾಜಕ ವ್ಯವಸ್ಥೆ ಸೃಷ್ಟಿಯಾಗಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಲು ಇಷ್ಟವಿಲ್ಲದ ಯಾರೇ ಆಗಲಿ ಪದಚ್ಯುತಿಗೊಳಿಸಿ ಅರ್ಹರನ್ನು ನೇಮಕ ಮಾಡಬೇಕು.
-ಟಿ.ಎ.ನಾರಾಯಣ ಗೌಡ, ರಾಜ್ಯಾಧ್ಯಕ್ಷ, ಕನ್ನಡ ರಕ್ಷಣಾ ವೇದಿಕೆ







