ಇತಿಹಾಸದ ದಾಖಲೀಕರಣ ಸಾರ್ವಕಾಲಿಕ: ಮನೋಹರ ಪ್ರಸಾದ್
‘ಮರಕೊಗು ಆವಾತೊ ಮರ್ಹೂಂ ಬ್ಯಾರಿಙ’ ಗ್ರಂಥ ಅನಾವರಣ

ಮಂಗಳೂರು, ಡಿ.18: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರತಂದ ‘ಮರಕೊಗು ಆವಾತೊ ಮರ್ಹೂಂ ಬ್ಯಾರಿಙ’ (ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು)ಗ್ರಂಥ ಮತ್ತು ‘ಬ್ಯಾರಿ ಹಿರಿಯಙಲೊ ಕಲ್ಬು ನೊರಞೊ ಪಲಕ’ (ಬ್ಯಾರಿ ಹಿರಿಯರ ಮನದಾಳದ ಮಾತು) ಸಾಕ್ಷ್ಯಚಿತ್ರ ಡಿವಿಡಿ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ನಗರದ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ‘ಬ್ಯಾರಿ ಮುಸ್ಲಿಂ ಸಮುದಾಯದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಸಾಕಷ್ಟು ಮಂದಿಯಿದ್ದಾರೆ. ಆ ಪೈಕಿ ಮೊದಲ ಸಂಪುಟದಲ್ಲಿ ಅಗಲಿದ 123 ಮಂದಿಯ ಪರಿಚಯಾತ್ಮಕ ಲೇಖನಗಳನ್ನು ಒಳಗೊಂಡ ಗ್ರಂಥ ಹೊರಗೆ ತಂದಿರುವುದು ಶ್ಲಾಘನೀಯವಾಗಿದೆ. ಗತಿಸಿ ಹೋದ ಮಹನೀಯರ ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಇತಿಹಾಸದ ದಾಖಲೀಕರಣ ಮಾಡಿದಂತಾಗುತ್ತದೆ. ಈ ದಾಖಲೀಕರಣವು ಸಾರ್ವಕಾಲಿಕವಾಗಲಿದೆ ಎಂದರು.
‘ಮರೆಯಲಾಗದ ಗ್ರಂಥ’ವನ್ನು ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಬಿಡುಗಡೆಗೊಳಿಸಿದರು. ‘ಬ್ಯಾರಿ ಹಿರಿಯರ ಮನದಾಳದ ಮಾತು’ ಸಾಕ್ಷಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಅಬೂಬಕ್ಕರ್ ಸಿದ್ದೀಕ್, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಎಂ. ಅಹ್ಮದ್ ಬಾವ ಮೊಹಿದಿನ್ ಪಡೀಲ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸದಸ್ಯರಾದ ಶಂಶೀರ್ ಬುಡೋಳಿ, ನಝೀರ್ ಪೊಲ್ಯ, ರೂಪಶ್ರೀ ವರ್ಕಾಡಿ, ಸುರೇಖಾ, ಚಂಚಲಾಕ್ಷಿ, ‘ಮರಕೊಗು ಆವಾತೊ ಮರ್ಹೂಂ ಬ್ಯಾರಿಙ’ ಗ್ರಂಥದ ಆಯ್ಕೆ ಸಮಿತಿಯ ಸದಸ್ಯರಾದ ಸಂಶುದ್ದೀನ್ ಮಡಿಕೇರಿ, ಹನೀಫ್ ಹಾಜಿ ಗೋಳ್ತಮಜಲು, ಕೆ.ಕೆ.ಶಾಹುಲ್ ಹಮೀದ್, ಅನ್ಸಾರ್ ಕಾಟಿಪಳ್ಳ, ಸಫ್ವಾನ್ ಶಾ, ಸಂಪಾದಕ ಮಂಡಳಿಯ ಸದಸ್ಯರಾದ ಹಂಝ ಮಲಾರ್, ಆಯಿಶಾ ಯು.ಕೆ. ಮತ್ತಿತರರು ಉಪಸ್ಥಿತರಿದ್ದರು.
ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಕಾಡಮಿಯ ಸದಸ್ಯ ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.
ಜ.1: ಬ್ಯಾರಿ ಭವನಕ್ಕೆ ಶಿಲಾನ್ಯಾಸ
ಬ್ಯಾರಿ ಭವನ ನಿರ್ಮಾಣಕ್ಕೆ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಸಮೀಪ 25 ಸೆಂಟ್ಸ್ ಜಮೀನು ಮಂಜೂರಾಗಿದೆ. 2021ರ ಜ.1ರಂದು ಬೆಳಗ್ಗೆ 10 ಗಂಟೆಗೆ ಬ್ಯಾರಿ ಭವನಕ್ಕೆ ಶಿಲಾನ್ಯಾಸ ನೆರವೇರಿಸಲಾಗಗುವುದು. ಈಗಾಗಲೆ ಸರಕಾರ 6 ಕೋ.ರೂ. ಅನುದಾನ ಮಂಜೂರು ಗೊಳಿಸಿದ್ದು, ಆ ಪೈಕಿ 3 ಕೋ.ರೂ. ಬಿಡುಗಡೆಯಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದರು.









