ಕೃಷಿ ಕಾಯ್ದೆಗಳನ್ನು ಹಿಂತೆಗೆಯಿರಿ ಎಂದು 10 ಅರ್ಥಶಾಸ್ತ್ರಜ್ಞರಿಂದ ಕೇಂದ್ರಕ್ಕೆ ಪತ್ರ

ಹೊಸದಿಲ್ಲಿ,ಡಿ.18: ರೈತರಿಗೆ ಮೂಲಭೂತವಾಗಿ ಹಾನಿಕರವಾದ ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ದೇಶದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಅರ್ಥಶಾಸ್ತ್ರಜ್ಞರು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿದ್ದಾರೆ.
ಹೈದರಾಬಾದ್ ವಿವಿಯ ನಿವೃತ್ತ ಪ್ರೊಫೆಸರ್ ಡಿ. ನರಸಿಂಹ ರೆಡ್ಡಿ , ಸಾರ್ವಜನಿಕ ಆಡಳಿತ ಹಾಗೂ ಸಮಾಜವಿಜ್ಞಾನ ಸಂಸ್ಥೆಯ ವಿಶ್ರಾಂತ ಪ್ರೊಫೆಸರ್ ಕಮಲ್ ನಯನ್ ಕಾಬ್ರಾ, ತಿರುವನಂತಪುರದ ಅಭಿವೃದ್ಧಿ ಅಧ್ಯಯನ ಕೇಂದ್ರದ ಪ್ರೊಫೆಸರ್ ಹಾಗೂ ಕೇರಳ ರಾಜ್ಯ ಯೋಜನಾ ಮಂಡಳಿಯ ಸದಸ್ಯ ಕೆ.ಎನ್.ಹರಿಲಾಲ್, ಮುಂಬೈನ ಟಾಟಾ ಸಮಾಜ ವಿಜ್ಞಾನಸಂಸ್ಥೆಯ ಪ್ರೊಫೆಸರ್ ಆರ್.ರಾಮ್‌ಕುಮಾರ್ ಕೃಷಿ ಸಚಿವರಿಗೆ ಪತ್ರ ಬರೆದಿರುವ ಅರ್ಥಶಾಸ್ತ್ರಜ್ಞರಲ್ಲಿ ಸೇರಿದ್ದಾರೆ.
ದೇಶದ ಕೃಷಿ ನೀತಿಯ ವಿಷಯಗಳಲ್ಲಿ ಬಹಳ ಸಮಯದಿಂದ ತಮ್ಮನ್ನು ತೊಡಗಿಸಿಕೊಂಡಿದ್ದ ಈ ಅರ್ಥಶಾಸ್ತ್ರಜ್ಞರು ನೂತನ ಕೃಷಿ ಕಾನೂನುಗಳು ಸಣ್ಣ ಹಾಗೂ ಸಾಧಾರಣ ರೈತರ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲವೆಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
‘‘ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಬದಲಾವಣೆಗಳು ಅಗತ್ಯವಿರುವುದಾಗಿ ನಾವು ನಂಬಿದ್ದೇವೆ. ಆದರೆ ಈ ಕಾಯ್ದೆಗಳ ಮೂಲಕ ಜಾರಿಗೆ ತರಲಾದ ಸುಧಾರಣೆಗಳು ಈ ಉದ್ದೇಶವನ್ನು ಈಡೇರಿಸುವುದಿಲ್ಲ. ಕೃಷಿಕರಿಗೆ ಅವರ ಬೆಳೆಗಳಿಗೆ ಯೋಗ್ಯ ಬೆಲೆ ಲಭಿಸುವುದಿಲ್ಲ, ಈ ಹಿಂದೆ ಇರುವ ಕಾನೂನುಗಳಡಿಯಲ್ಲಿ ಅವರಿಗೆ ತಮಗೆ ಬೇಕಾದಲ್ಲಿಗೆ ಮಾರುವ ಸ್ವಾತಂತ್ರವಿರಲಿಲ್ಲ ಹಾಗೂ ನಿಯಂತ್ರಿತ ಮಾರುಕಟ್ಟೆಗಳು ರೈತರ ಹಿತಾಸಕ್ತಿಗೆ ಅನುಗುಣವಾಗಿಲ್ಲ ಎಂಬಂತಹ ತಪ್ಪು ಗ್ರಹಿಕೆಗಳು ಹಾಗೂ ವಾದಗಳನ್ನು ಆಧರಿಸಿ ಈ ಕಾಯ್ದೆಗಳನ್ನು ರೂಪಿಸಲಾಗಿದೆ ’’ ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ.
ನೂತನ ಕಾನೂನುಗಳು ಮಾರುಕಟ್ಟೆಗಳ ನಿಯಂತ್ರಣದಲ್ಲಿ ರಾಜ್ಯ ಸರಕಾರಗಳ ಪಾತ್ರವನ್ನು ಕಡೆಗಣಿಸಿವೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಅವರು, ಕೇಂದ್ರ ಸರಕಾರಕ್ಕಿಂತ ರಾಜ್ಯ ಸರಕಾರಗಳು ರೈತರನ್ನು ತಲುಪಬಲ್ಲವು ಹಾಗೂ ಅವರ ಹಿತಾಸಕ್ತಿಗಳಿಗೆ ಉತ್ತರದಾಯಿಗಳಾಗಿರುತ್ತವೆ. ಹೀಗಾಗಿ ಕೃಷಿ ಮಾರುಕಟ್ಟೆಗಳ ವ್ಯಾಪಾರವನ್ನು ಕೇಂದ್ರ ಸರಕಾರದ ವ್ಯಾಪ್ತಿಗೆ ತರುವುದಕ್ಕಿಂತ ಅವುಗಳನ್ನು ರಾಜ್ಯಗಳು ನಿಯಂತ್ರಿಸುವುದು ಹೆಚ್ಚು ಸೂಕ್ತವಾದುದು ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಿಸಿದ್ದಾರೆ.







