ಪಶ್ಚಿಮಬಂಗಾಳದಲ್ಲಿ ಕ್ರಿಮಿನಲ್ ಪ್ರಕರಣ ಬಿಜೆಪಿ ನಾಯಕರಿಗೆ ಸುಪ್ರೀಂನಿಂದ ಮಧ್ಯಂತರ ರಕ್ಷಣೆ

ಹೊಸದಿಲ್ಲಿ, ಡಿ. 18: ಪಶ್ಚಿಮಬಂಗಾಳದಲ್ಲಿ ದಾಖಲಿಸಲಾದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸದಂತೆ ಮುಕುಲ್ ರಾಯ್ ಹಾಗೂ ಸಂಸದ ಕೈಲಾಸ್ ವಿಜಯವರ್ಗೀಯ ಸಹಿತ ಬಿಜೆಪಿಯ ಐವರು ನಾಯಕರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ರಕ್ಷಣೆ ನೀಡಿದೆ.
ಮುಂದಿನ ವಿಚಾರಣೆಯ ದಿನಾಂಕದ ವರೆಗೆ ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪಶ್ಚಿಮಬಂಗಾಳ ಪೊಲೀಸರಿಗೆ ನಿರ್ದೇಶಿಸಿದೆ. ಬಿಜೆಪಿ ನಾಯಕರು ಸಲ್ಲಿಸಿದ ಐದು ಪ್ರತ್ಯೇಕ ದೂರುಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಪಶ್ಚಿಮಬಂಗಾಳ ಸರಕಾರಕ್ಕೆ ನ್ಯಾಯಮೂರ್ತಿ ಕಿಶನ್ ಕೌಲ್ ನೇತೃತ್ವದ ಪೀಠ ಸೂಚಿಸಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಅಣತಿಯಂತೆ ಪಶ್ಚಿಮಬಂಗಾಳ ಪೊಲೀಸರು ತಮ್ಮನ್ನು ಗುರಿಯಾಗಿಸುತ್ತಿದ್ದಾರೆ ಎಂದು ಆರೋಪಿಸಿ ಮುಕುಲ್ ರಾಯ್ ಹಾಗೂ ಇತರ ಆರು ಮಂದಿ ಬಿಜೆಪಿ ನಾಯಕರು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.
ಬಿಜೆಪಿಯ ಸಂಸದ ಅರ್ಜುನ್ ಸಿಂಗ್ ಹಾಗೂ ಕೈಲಾಸ್ ವಿಜಯವರ್ಗೀಯ ಒಳಗೊಂಡ ದೂರುದಾರರು, ಪಶ್ಚಿಮಬಂಗಾಳದ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ ಎಲ್ಲ ಪ್ರಕರಣಗಳನ್ನು ಇತರ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸುವಂತೆ ಕೋರಿದ್ದರು. ಮುಕುಲ್ ರಾಯ್, ವಿಜಯವರ್ಗೀಯ ಹಾಗೂ ಅರ್ಜುನ್ ಸಿಂಗ್ ಅಲ್ಲದೆ, ಇತರ ಇಬ್ಬರು ಬಿಜೆಪಿ ನಾಯಕರಾದ ಸೌರವ್ ಸಿಂಗ್ ಹಾಗೂ ಪವನ್ ಕುಮಾರ್ ಸಿಂಗ್ ಕೂಡ ಪಶ್ಚಿಮಬಂಗಾಳದಲ್ಲಿ ತಮ್ಮ ವಿರುದ್ಧ ದಾಖಲಿಸಲಾದ ಪ್ರಕರಣಗಳಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಐವರು ನಾಯಕರಿಗೆ ರಕ್ಷಣೆ ನೀಡುವ ಸಂದರ್ಭ ಪೀಠ, ಪಶ್ಚಿಮಬಂಗಾಳದ ಬಿಜೆಪಿ ನಾಯಕ ಕಬೀರ್ ಶಂಕರ್ ಅವರ ಭದ್ರತಾ ಸಿಬ್ಬಂದಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯ ಆರೋಪಕ್ಕೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶಿಸಿತು.







