ಕೋವಿಡ್-19 ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತ: ಆರೋಗ್ಯ ಸಚಿವಾಲಯ

ಹೊಸದಿಲ್ಲಿ, ಡಿ. 18: ರಾಷ್ಟ್ರೀಯ ಲಸಿಕೆ ನೀಡುವ ಯೋಜನೆಯ ಭಾಗವಾಗಿ ಕೊರೋನ ಸೋಂಕಿನ ವಿರುದ್ಧ ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಪುನರುಚ್ಚರಿಸಿದೆ.
ಸಾರ್ವಜನಿಕರು ಆಗಾಗ ಕೇಳುತ್ತಿರುವ ಪ್ರಶ್ನೆಗಳಿಗೆ ಸಂಬಂಧಿಸಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಅದು ಈ ಹೇಳಿಕೆ ನೀಡಿದೆ. ‘‘ಕೋವಿಡ್-19ಗೆ ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತ. ಆದರೆ, ರೋಗದಿಂದ ರಕ್ಷಿಸಿಕೊಳ್ಳಲು ಹಾಗೂ ಕುಟುಂಬದ ಸದಸ್ಯರು, ಗೆಳೆಯರು, ಸಂಬಂಧಿಕರು ಹಾಗೂ ಸಹ ಕಾರ್ಮಿಕರಿಗೆ ರೋಗ ಹರಡುವುದನ್ನು ಮಿತಿಗೊಳಿಸಲು ಕೋವಿಡ್-19 ಲಸಿಕೆಯನ್ನು ನಿಗದಿಪಡಿಸಿದಂತೆ ಸಂಪೂರ್ಣವಾಗಿ ಸ್ವೀಕರಿಸುವುದು ಸೂಕ್ತವಾಗಿದೆ’’ ಸರಕಾರದ ದಾಖಲೆ ಹೇಳಿದೆ.
ಅತಿ ಅಪಾಯದಲ್ಲಿ ಇರುವವರು ಮೊದಲ ಹಂತದ ಆದ್ಯತೆ ಪಟ್ಟಿಯಲ್ಲಿ ಇದ್ದಾರೆ. ಮೊದಲ ಗುಂಪಿನಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಒಳಗೊಂಡಿದ್ದಾರೆ. ಎರಡನೇ ಗುಂಪಿನಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ ಕೋವಿಡ್-19 ಲಸಿಕೆಯನ್ನು ನಿರ್ವಹಿಸುವ ತಾಂತ್ರಿಕ ತಜ್ಞರ ಶಿಫಾರಸಿನಂತೆ ಅಧಿಕ ರಕ್ತದೊತ್ತಡ, ಮಧುಮೇಹ, ದೀರ್ಘಕಾಲದ ಯಕೃತ್ ಹಾಗೂ ಮೂತ್ರಪಿಂಡದ ಕಾಯಿಲೆಯಂತಹ ಬಹು ರೋಗಗಳಿಂದ ಬಳಲುತ್ತಿರುವ 50 ವರ್ಷ ಪ್ರಾಯಕ್ಕಿಂತ ಕೆಳಗಿನವರಿಗೆ ಸ್ವೀಕರಿಸಲಿದ್ದಾರೆ. ಬಹುರೋಗ ಇರುವ ಶೇ. 78ರಷ್ಟು ಜನರನ್ನು ಒಳಗೊಳಿಸಲು ಸಾಧ್ಯವಾಗುತ್ತದೆ ಹಾಗೂ ಆ ಮೂಲಕ ಕೋವಿಡ್-19ನಿಂದ ಉಂಟಾಗುವ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ 50 ವರ್ಷ ಪ್ರಾಯಕ್ಕಿಂತ ಮೇಲಿನವರನ್ನು ಇದರಲ್ಲಿ ಸೇರ್ಪಡೆಗೊಳಿಸಲಾಗಿದೆ.
ನೋಂದಣಿ ಹಾಗೂ ಲಸಿಕೆಯ ಅನಾನುಕೂಲತೆ ತಪ್ಪಿಸಲು ಲಸಿಕೆ ನೀಡುವ ಆರೋಗ್ಯ ಕೇಂದ್ರ ಹಾಗೂ ಲಸಿಕೆ ನೀಡುವ ಸಮಯವನ್ನು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ ಎಂದು ಅದು ತಿಳಿಸಿದೆ.







