ಭಾರತೀಯ ಅಮೆರಿಕನ್ ವೇದಾಂತ್ ಪಟೇಲ್ ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕ

ವಾಷಿಂಗ್ಟನ್: ಶ್ವೇತಭವನದ ಸಂವಹನ ಹಾಗೂ ಪತ್ರಿಕಾ ಸಿಬ್ಬಂದಿಯ ಹೆಚ್ಚುವರಿ ಸದಸ್ಯರನ್ನು ಘೋಷಿಸಿರುವ ನಿಯೋಜಿತ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ -ಅಮೆರಿಕನ್ ವೇದಾಂತ್ ಪಟೇಲ್ ಅವರನ್ನು ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಪ್ರಸ್ತುತ ಪಟೇಲ್ ಅವರು ಬೈಡನ್ ಅವರ ಹಿರಿಯ ವಕ್ತಾರರಾಗಿದ್ದಾರೆ ಹಾಗೂ ಬೈಡನ್ ಅಭಿಯಾನದ ಭಾಗವಾಗಿದ್ದಾರೆ. ಅಲ್ಲಿ ಅವರು ಪ್ರಾದೇಶಿಕ ಸಂವಹನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡನ್ ಅವರ ಪ್ರಾಥಮಿಕ ಪ್ರಚಾರ ಅಭಿಯಾನದ ಸಮಯದಲ್ಲಿ ಪಟೇಲ್ ಅವರು ನೆವಾಡಾ ಹಾಗೂ ವೆಸ್ಟರ್ನ್-ಪ್ರೈಮರಿ ಸ್ಟೇಟ್ಸ್ ಸಂವಹನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಪಟೇಲ್ ಈ ಹಿಂದೆ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಅವರ ಸಂವಹನ ನಿರ್ದೇಶಕರಾಗಿ, ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ಪಾಶ್ಚಿಮಾತ್ಯ ಪ್ರಾದೇಶಿಕ ಪತ್ರಿಕಾ ಕಾರ್ಯದರ್ಶಿಯಾಗಿ ಹಾಗೂ ಕಾಂಗ್ರೆಸ್ ಸದಸ್ಯ ಮೈಕ್ ಹೋಂಡಾಗೆ ಸಂವಹನ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಭಾರತದಲ್ಲಿ ಜನಿಸಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆದಿರುವ ಪಟೇಲ್ ಕ್ಯಾಲಿಫೋರ್ನಿಯಾ-ರಿವರ್‌ಸೈಡ್ ಹಾಗೂ ಫ್ಲೋರಿಡಾ ಯುನಿವರ್ಸಿಟಿಯ ಪದವೀಧರರಾಗಿದ್ದಾರೆ.







