ಕ್ರಿಸ್ಮಸ್, ಹೊಸವರ್ಷ ಸರಳವಾಗಿ ಆಚರಿಸಲು ನಿರ್ಧಾರ : ಬಿಷಪ್ ಜೆರಾಲ್ಡ್

ಉಡುಪಿ, ಡಿ.19: ಕೊರೋನ ಸೋಂಕಿನ ಅಪಾಯ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ. ಈ ನಿಟ್ಟಿನಲ್ಲಿ ಕ್ರಿಸ್ಮಸ್ ಹಾಗೂ ಹೊಸವರ್ಷವನ್ನು ಬಹಳ ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಧರ್ಮಪ್ರಾಂತ್ಯದ ಕ್ರೈಸ್ತ ಕುಟುಂಬಗಳು ಈ ಆದೇಶ ಪಾಲಿಸುವಂತೆ ಈಗಾಗಲೇ ಕರೆ ಕೊಟ್ಟಿದ್ದೇವೆ. ಹೆಚ್ಚು ಆಡಂಬರ ಇಲ್ಲದೆ ಆಚರಿಸುವ ಕ್ರಿಸ್ಮಸ್ ಹಬ್ಬದಿಂದ ಉಳಿತಾಯದ ಹಣವನ್ನು ಬಡವರಿಗೆ ನೀಡಲಾಗುವುದು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವತಿಯಿಂದ ಶನಿವಾರ ಉಡುಪಿ ಶೋಕಾ ಮಾತಾ ಇಗರ್ಜಿಯ ಸಭಾಂಗಣದಲ್ಲಿ ಆಯೋಜಿಸಲಾದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಗತ್ತು ಎಂಬ ಕುಟುಂಬದಲ್ಲಿ ನಾವೆಲ್ಲರೂ ವಾಸಿಸುತ್ತಿರುವಾಗ ನಮ್ಮ ಧರ್ಮ, ಸಂಸ್ಕೃತಿ, ಆಚಾರ ವಿಚಾರ, ರೀತಿ ರಿವಾಜುಗಳನ್ನು ದಾಟಿ ಮಾನ ವೀಯ ಮೌಲ್ಯಗಳನ್ನು ಪಸರಿಸಬೇಕು. ಈ ಕಾಲಘಟ್ಟದಲ್ಲಿ ಹೊಸ ಚಿಂತನೆ, ಹೊಸ ಪ್ರಪಂಚದ ದೃಷ್ಠಿಕೋನ ಅಗತ್ಯವಿದೆ ಎಂದರು.
ಲಾಕ್‌ಡೌನ್‌ನಂತಹ ಸಂದಿಗ್ಧ ಸ್ಥಿತಿಯಲ್ಲಿ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು ಕೋವಿಡ್ ಸೇನಾನಿಗಳಾಗಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದೇ ರೀತಿ ಆ ಕಠಿಣ ದಿನಗಳಲ್ಲಿಯೂ ವಸ್ತು ನಿಷ್ಠ ವರದಿ ಭಿತ್ತರಿಸಿದ ಪತ್ರಕರ್ತರೂ ಕೂಡ ಕೋವಿಡ್ ಸೇನಾನಿಗಳಂತೆ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಧಕ ಪತ್ರಕರ್ತರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದಯ್ ಪಡಿಯಾರ್, ಶ್ರೀಪತಿ ಹೆಗ್ಡೆ ಹಕ್ಲಾಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ನಝೀರ್ ಪೊಲ್ಯ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಚೇತನ್ ಲೋಬೊ ಅವರ ಬರಹಗಳ ಸಂಗ್ರಹ ‘ಚೇತನ ಚಿಂತನ’ ಪುಸ್ತಕ ಬಿಡುಗಡೆ ಗೊಳಿಸಲಾಯಿತು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಉಡುಪಿ ಶೋಕ ಮಾತಾ ಇಗರ್ಜಿ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಉಪಸ್ಥಿತರಿದ್ದರು. ಫಾ.ಚೇತನ್ ಲೋಬೊ ಸ್ವಾಗತಿಸಿ ದರು. ಮಾಧ್ಯಮ ಸಮನ್ವಯಕಾರ ಮೈಕಲ್ ರೊಡ್ರಿಗಸ್ ವಂದಿಸಿದರು. ವಂ.ರೊಯ್ಸನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.







