ಕೊಡವರು ಬೀಫ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು, ಡಿ. 19: ‘ಕೊಡವರು ಬೀಫ್(ದನದ ಮಾಂಸ) ತಿನ್ನುತ್ತಾರೆ ಎಂದು ನಾನು ಹೇಳಿಲ್ಲ, ಕೊಡವ ಸಂಸ್ಕೃತಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆಡು, ಕುರಿ, ಕೋಳಿ, ಹಂದಿ, ದನ ಹೀಗೆ ನಮ್ಮಲ್ಲಿ ಭಿನ್ನ ಆಹಾರ ಸಂಸ್ಕೃತಿ ಇದೆ. ಆಹಾರಕ್ಕೆ ಜಾತಿ-ಧರ್ಮಗಳನ್ನು ಗಂಟುಹಾಕುವುದು ತಪ್ಪು ಎಂಬರ್ಥದಲ್ಲಿ ನಾನು ಹೇಳಿದ್ದೇನೆಯೇ ಹೊರತು ಕೊಡವರು ಬೀಫ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ ಎಂದು ವಿವರಣೆ ನೀಡಿದ್ದಾರೆ.
'ಕೊಡವರು ಬೀಫ್ ತಿನ್ನುತ್ತಾರೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ನಿನ್ನೆ ನೀಡಿದ್ದಾರೆನ್ನಲಾದ ಹೇಳಿಕೆ ಸಂಬಂಧ ಕೊಡವ ಸಮುದಾಯದವರಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಅವರು ಟ್ವೀಟ್ ಮಾಡಿ, ಕೊಡವರು ಬೀಫ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕಾಂಗ್ರೆಸ್ ಪಕ್ಷ ರೈತರ ಹೋರಾಟಗಳಿಗೆ ಬೆಂಬಲ ನೀಡುವ ಜೊತೆಗೆ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡಲಿದೆ. ದೇಶದ ಕೃಷಿ ವ್ಯವಸ್ಥೆಗೆ ಮಾರಕವಾದ ಕಾಯ್ದೆಗಳ ಜಾರಿಗೆ ನಮ್ಮ ಪ್ರಬಲ ವಿರೋಧವಿದೆ'
-ಸಿದ್ದರಾಮಯ್ಯ, ವಿಪಕ್ಷ ನಾಯಕ







