ಶಿರಾಡಿ ಸುರಂಗ ಮಾರ್ಗದ ಡಿಪಿಆರ್ ಸಿದ್ಧ: ನಿತಿನ್ ಗಡ್ಕರಿ
69 ಕೋಟಿ ರೂ. ವೆಚ್ಚದ ಕೂಳೂರು ಷಟ್ಪಥ ಸೇತುವೆಗೆ ಶಿಲಾನ್ಯಾಸ

ಮಂಗಳೂರು ಡಿ.19: ಬಹುನಿರೀಕ್ಷಿತ ಶಿರಾಡಿ ಘಾಟಿ ಸುರಂಗ ಮಾರ್ಗ ಕಾಮಗಾರಿಯ ಡಿಪಿಆರ್ ಸಿದ್ಧವಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಅವರು ಇಂದು ಮಂಗಳೂರಿನ ಕೂಳೂರು ಫಲ್ಗುಣಿ ನದಿಗೆ ಅಡ್ಡಲಾಗಿ ಷಟ್ಪಥ (ಆರು ಪಥಗಳ) ಸೇತುವೆ, ಮೂರು ಘಾಟಿ ರಸ್ತೆಗಳ ಕಾಮಗಾರಿ ಸೇರಿದಂತೆ ರಾಜ್ಯದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಿಲಾನ್ಯಾಸ ಹಾಗೂ ಲೋಕಾರ್ಪಣೆಯನ್ನು ವೀಡಿಯೋ ಕಾನ್ಫೆರೆನ್ಸ್ ಮೂಲಕ ನೆರವೇರಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ವೀಡಿಯೋ ಕಾನ್ಫೆರೆನ್ಸ್‌ಗೆ ವ್ಯವಸ್ಥೆ ಮಾಡಲಾಗಿತ್ತು.
ಶಿರಾಡಿ ಘಾಟಿ ಸುರಂಗ ಮಾರ್ಗ 10 ಸಾವಿರ ಕೋಟಿ ರೂ. ಗಳ ಕಾಮಗಾರಿಯಾಗಿದ್ದು, 23.6 ಕಿ.ಮೀ. ಉದ್ದ ಇರಲಿದೆ. ಮುಂದಿನ ಹಂತದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಗಡ್ಕರಿ ಹೇಳಿದರು.
ಇದೇ ಸಂದರ್ಭ ಗಡ್ಕರಿ ಅವರು ಸಂಪಾಜೆ ಘಾಟಿ ಮಾರ್ಗದಲ್ಲಿ ತಡೆಗೋಡೆ, ಕಾಂಕ್ರೀಡ್ ಚರಂಡಿ, ರಸ್ತೆ ಸುರಕ್ಷತೆ ಕೆಲಸಗಳನ್ನೊಳಗೊಂಡ ಒಟ್ಟು 58.84 ಕೋಟಿ ರೂ.ಗಳ ಕಾಮಗಾರಿ, ಶಿರಾಡಿ ಘಾಟಿ ರಸ್ತೆಯ ಕಣಿವೆ ಭಾಗದಲ್ಲಿ 36.5 ಕೋಟಿ ರೂ. ವೆಚ್ಚದ 26 ಕಿ.ಮೀ. ಉದ್ದದ ಶಾಶ್ವತ ತಡೆಗೋಡೆ ಕಾಮಗಾರಿ, ಚಾರ್ಮಾಡಿ ಘಾಟಿ ರಸ್ತೆಯಲ್ಲಿ 13 ಕಿ.ಮೀ. ಉದ್ದದ ಕಣಿವೆ ಭಾಗದ ಶಾಶ್ವತ ತಡೆಗೋಡೆಯ 19.36 ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರಿನ ಫಲ್ಗುಣಿ ನದಿಗೆ ಅಡ್ಡಲಾಗಿ 69.02 ಕೋಟಿ ರೂ. ವೆಚ್ಚದ ಆರು ಪಥದ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಅಲ್ಲದೆ, ಈಗಾಗಲೇ ಉದ್ಘಾಟನೆಗೊಂಡಿರುವ ಗುರುಪುರ ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್ ಉಳಿಪಾಡಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಮೇಯರ್ ದಿವಾಕರ್ ಪಾಂಡೇಶ್ವರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಶಿಶು ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಬಿ.ಸಿ. ರೋಡ್- ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಹಾಗೂ ಕುಲಶೇಖರ- ಕಾರ್ಕಳ ಹೆದ್ದಾರಿ ಕಾಮಗಾರಿಗೆ ಶೇ.90ರಷ್ಟು ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ. ಈಗ ಶಿಲಾನ್ಯಾಸಗೊಂಡಿರುವ ನಾಲ್ಕು ಕಾಮಗಾರಿಗಳು ಇನ್ನು 2-3 ವರ್ಷದೊಳಗೆ ಪೂರ್ತಿಗೊಳಿಸುವ ಗುರಿ ಹೊಂದಲಾಗಿದೆ.
-ನಳಿನ್ ಕುಮಾರ್ ಕಟೀಲು, ಸಂಸದರು.
ಕೂಳೂರು ಸೇತುವೆ ವಿವರ
ಒಟ್ಟು ಕಾಮಗಾರಿ ಮೊತ್ತ: 69.02 ಕೋಟಿ ರುಪಾಯಿ
ಸೇತುವೆ ಉದ್ದ: 0.780 ಕಿ.ಮೀ.
ಮುಖ್ಯ ಸೇತುವೆಯ ಉದ್ದ: 182.5 ಮೀಟರ್.
ಕೂಡುರಸ್ತೆಯ ಉದ್ದ: 0.589 ಮೀ. (ಎರಡೂ ಕಡೆ)









