ಶಿವಮೊಗ್ಗ: ಅನಿಲ ದರ ಏರಿಕೆ ಖಂಡಿಸಿ ಗ್ಯಾಸ್ ಸಿಲಿಂಡರ್ ಹಿಡಿದು ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ, ಡಿ.19: ನಿರಂತರ ಪೆಟ್ರೋಲ್- ಡಿಸೇಲ್ ಹಾಗೂ ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಗ್ಯಾಸ್ ಸಿಲಿಂಡರ್ ಹಿಡಿದು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನೋಟು ಅಮಾನ್ಯೀಕರಣದಂತಹ ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದ್ದಾರೆ ಎಂದ ದೂರಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಡಿಮೆ ದರದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ನೀಡುತ್ತೇವೆ, ದೇಶದ ಜನರಿಗೆ ಅಚ್ಚೇ ದಿನ್ ನೀಡುತ್ತೇವೆ ಎಂದು ಪ್ರಧಾನಿ ಮೋದಿಯವರು ಘೋಷಣೆ ಮಾಡಿದ್ದರು. ಆದರೆ ಪ್ರತಿನಿತ್ಯ ಅಡುಗೆ ಅನಿಲ ದರ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 400 ರೂಪಾಯಿಗೆ ಅಡುಗೆ ಅನಿಲ ಹಾಗೂ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಸಬ್ಸಿಡಿಯನ್ನು ಕಸಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ,ಕಾರ್ಮಿಕ ಕಾಯ್ದೆಗಳು ಜನ ವಿರೋಧಿಯಾಗಿವೆ.ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿವಮೊಗ್ಗದ ಮೆಗ್ಗಾನ್ ನಲ್ಲಿದ್ದ ಅಪ್ರಾಪ್ತೆ ಬಾಲಕಿಯ ಅತ್ಯಾಚಾರವಾಗಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸಂತ್ರಸ್ತೆಯನ್ನು ಮಾತನಾಡಿಸುವ ಸೌಜನ್ಯವನ್ನೂ ತೋರುವುದಿಲ್ಲ. ಒಂದು ಸಣ್ಣ ಗಲಾಟೆಗೆ 12 ದಿನ ನಗರದಲ್ಲಿ ಸೆಕ್ಷನ್ ಜಾರಿಗೊಳಿಸುವಲ್ಲಿ ಆಸಕ್ತಿ ತೋರಿಸುತ್ತಾರೆ. ಆದರೆ ಅತ್ಯಾಚಾರ ಸಂತ್ರಸ್ತೆಯನ್ನು ಸಂತೈಸುವ ಕೆಲಸ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಲಕಿಯ ಅತ್ಯಾಚಾರ ನಡೆಸಿದ ಅರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಬಾಲಕಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮುಖಂಡರಾದ ಹೆಚ್.ಸಿ ಯೋಗೇಶ್, ನಯಾಝ್ ಅಹಮ್ಮದ್ ಖಾನ್, ಕೆ.ರಂಗನಾಥ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಚೇತನ್.ಕೆ, ಗರೀಶ್ ಸೇರಿದಂತೆ ಮತ್ತಿತರರು ಇದ್ದರು.







