ಕುಂದಾಪುರ ಪೋಕ್ಸೊ ಪ್ರಕರಣ: ಆರೋಪ ಸಾಬೀತು
ಉಡುಪಿ, ಡಿ.19: ಆರು ವರ್ಷಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೊ ಪ್ರಕರಣದ ಆರೋಪಿಯೊಬ್ಬನನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು ದೋಷಿ ಎಂಬುದಾಗಿ ಇಂದು ಆದೇಶಿಸಿದೆ. ಶಿಕ್ಷೆಯ ಪ್ರಮಾಣವನ್ನು ಡಿ.21ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಆರೋಪಿಯನ್ನು ಗಣೇಶ್(35) ಎಂದು ಗುರುತಿಸಲಾಗಿದೆ. ಈತ 2014 ಎಪ್ರಿಲ್ 27ರಂದು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಮನೆ ಸಮೀಪದ 9 ವರ್ಷ ಪ್ರಾಯದ ಬಾಲಕಿಯ ಮನೆಗೆ ಅಕ್ರಮ ಪ್ರವೇಶ ಮಾಡಿ ಆಕೆಗೆ ತನ್ನ ಮೊಬೈಲ್ ಫೋನಿನಲ್ಲಿದ್ದ ಅಶ್ಲೀಲ ಸಿನೆಮಾ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ದೂರಲಾಗಿತ್ತು.
ಆತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಹಾಗೂ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 448 ಅಡಿ ಪ್ರಕರಣ ದಾಖಲಾಗಿತ್ತು. ಕುಂದಾಪುರದ ಅಂದಿನ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 13 ಮಂದಿ ಸಾಕ್ಷಿಗಳ ಪೈಕಿ 8 ಮಂದಿ ವಿಚಾರಣೆ ನಡೆಸಲಾಗಿತ್ತು. ಸಂತ್ರಸ್ತ ಬಾಲಕಿ ಅಭಿಯೋಜನೆಗೆ ಪೂರಕವಾಗಿ ಸಾಕ್ಷ್ಯ ನುಡಿದಿದ್ದು, ಅದರಂತೆ ಆರೋಪಿಯನ್ನು ದೋಷಿ ಎಂಬುದಾಗಿ ನ್ಯಾಯಾಧೀಶೆ ಯಾದವ್ ವನಮಾಲಾ ಆನಂದರಾವ್ ಆದೇಶ ನೀಡಿದರು. ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.







