ಗೋಮಾಂಸ ಸೇವಿಸದಂತೆ ಮುಸ್ಲಿಮರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ: ಸಿ.ಎಂ.ಇಬ್ರಾಹಿಂ

ಹುಬ್ಬಳ್ಳಿ, ಡಿ.19: ಗೋಹತ್ಯೆ ನಿಷೇಧಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ರೈತನ ಬಳಿಯಿರುವಂತಹ ಬರಡಾಗಿರುವ, ವಯಸ್ಸಾಗಿರುವ ಗೋವುಗಳನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆಗೆ ಸರಕಾರದ ಬಳಿ ಉತ್ತರವಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಮಾಂಸವನ್ನು ಮುಸ್ಲಿಮರು ಸೇವಿಸದಂತೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ರೈತ ಹಾಗೂ ಗೋವುಗಳ ಬಗ್ಗೆ ಸರಕಾರಕ್ಕೆ ನಿಜಕ್ಕೂ ಕಾಳಜಿಯಿದ್ದರೆ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಗೋಶಾಲೆಯನ್ನು ತೆರೆದು ಅವುಗಳ ಸಾಕಾಣಿಕೆಗೆ ಮುಂದಾಗಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಯಾರು ಕಾರಣ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ಈಗ ನಾವು ಏಕೆ ವಿಶ್ಲೇಷಣೆ ಮಾಡಿಕೊಂಡು ಕೂರಬೇಕು. ನಾವೇನಿದ್ದರೂ ಸೇರಿಸುವುದಕ್ಕೆ ನೋಡುವವರೇ ಹೊರತು, ಮುರಿಯುವವರಲ್ಲ. ನಾವು ಪಡುವ ಪ್ರಯತ್ನ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಅನ್ನೋದನ್ನು ಕಾದು ನೋಡೋಣ ಎಂದು ಇಬ್ರಾಹಿಂ ಹೇಳಿದರು.
ರಾಜಕೀಯ ಪಕ್ಷಗಳು ರೈಲ್ವೆ ಸ್ಟೇಷನ್ ಜಂಕ್ಷನ್ ರೀತಿಯಾಗಿದೆ. ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು. ನಮ್ಮ ಪಕ್ಷದಲ್ಲಿದ್ದ ಕೆಲವರು ಬಿಜೆಪಿ ಹೋಗಿದ್ದರಿಂದ ನಮಗೆ ತೊಂದರೆಯಾಯಿತು. ಜೆಡಿಎಸ್ ಜೊತೆ ಪುನರ್ ವಿವಾಹ ಸಾಧ್ಯವಿದೆಯೇ ಅನ್ನೋದನ್ನು ನೋಡುತ್ತಿದ್ದೇವೆ. ಕಾಂಗ್ರೆಸ್ ಸಂಬಂಧ ಬೆಸೆಯುವ ಕೆಲಸ ಮಾಡುತ್ತದೆಯೇ ಹೊರತು, ಮುರಿಯುವ ಕೆಲಸ ಮಾಡಲ್ಲ ಎಂದು ಅವರು ತಿಳಿಸಿದರು.
ಇದೇ ವೇಳೆ ಲವ್ ಜಿಹಾದ್ ನಿಷೇಧ ಕಾನೂನು ಜಾರಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಎಂ.ಇಬ್ರಾಹಿಂ, ಯಾರು ಯಾರ ಜೊತೆ ಮದುವೆ ಮಾಡಿಕೊಳ್ಳಬೇಕು ಅನ್ನೋದು ವಯಸ್ಕರಾಗಿರುವ ಹುಡುಗ, ಹುಡುಗಿಗೆ ಸಂಬಂಧಿಸಿದ ವಿಷಯ. ಅದರಲ್ಲಿ ಮುಖ್ಯಮಂತ್ರಿಗೆ ಯಾಕೆ ಆಸಕ್ತಿ. ಒತ್ತಾಯಪೂರ್ವಕವಾಗಿ ಮದುವೆಯಾದರೆ ಕ್ರಮ ಕೈಗೊಳ್ಳಲಿ. ಒಂದು ವೇಳೆ ಗಂಡ-ಹೆಂಡತಿ ನಡುವೆ ರಾಜಿಯಾದರೆ ಏನು ಮಾಡಲು ಸಾಧ್ಯ? ಯಾರು ಯಾರ ಜೊತೆ ಹೋಗುತ್ತಾರೆ ಅನ್ನೋದನ್ನು ನೋಡಿಕೊಂಡು ಕೂರುವ ಕೆಲಸ ಮುಖ್ಯಮಂತ್ರಿಯದ್ದೇ? ರಾಜ್ಯ ಸರಕಾರ ಇಂತಹ ವಿಷಯಗಳ ಬಗ್ಗೆ ಚಿಂತನೆ ಮಾಡುವುದೇ ಸರಿಯಲ್ಲ ಎಂದರು.
ಹೊರಟ್ಟಿ ಸಿಎಂ ಆಗುತ್ತಾರೆ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಪರಸ್ಪರ ವಾಗ್ವಾದ ವಿಚಾರ ಮಾಧ್ಯಮಗಳ ಮೂಲಕವೇ ಚರ್ಚೆಗೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಹಿರಿಯ ನಾಯಕ ಬಸವರಾಜ ಹೊರಟ್ಟಿ ಜೆಡಿಎಸ್ ಪಕ್ಷದ ಅಧ್ಯಕ್ಷರಾಗುತ್ತಾರೆ. ಅಲ್ಲದೆ, ಮುಖ್ಯಮಂತ್ರಿಯೂ ಆಗುತ್ತಾರೆ ಕಾದು ನೋಡಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.







