ಹಂಪಿ ಕನ್ನಡ ವಿವಿಗೆ ಕೂಡಲೇ ಅನುದಾನ ಬಿಡುಗಡೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಡಿ.19: ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಅನುದಾನ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗದ ಪರಿಸ್ಥಿತಿಗೆ ತಲುಪಿವೆ. ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಅನುದಾನ ನೀಡಿ, ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನೆರವಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆಗ್ರಹಿಸಿದ್ದಾರೆ.
ಶನಿವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ರಾಶಿ ರಾಶಿಯಾಗಿ ಶಾಸಕರನ್ನು, ಸರಕಾರದ, ಪಕ್ಷದ ಹಿಂಬಾಲಕರುಗಳನ್ನು ಈ ಕೆಟ್ಟ ಕಾಲದಲ್ಲಿ ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿ ಅವುಗಳಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿ ನೂರಾರು ಕೋಟಿ ರೂ. ಹಣವನ್ನು ದುಂದು ಮಾಡಲಾಗುತ್ತಿದೆ.
ಹಸಿದವನ ಹೊಟ್ಟೆಗೆ ಅನ್ನ, ಬಟ್ಟೆ ಮತ್ತು ಭಾಷೆಯ ಕೆಲಸಗಳಿಗೆ ಹಣ ನೀಡದ ಸರಕಾರ ನಾಡದ್ರೋಹಿ ಸರಕಾರವೆನ್ನಿಸಿಕೊಳ್ಳುತ್ತದೆ. ರೈತರ, ಕಾರ್ಮಿಕರ ಮತ್ತು ನಾಡ ಭಾಷಿಕರ ಸಿಟ್ಟಿಗೆ ಗುರಿಯಾದ ಸರಕಾರಗಳು ಹಿಂದೆಲ್ಲಾ ಧೂಳಿಪಟವಾಗಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಹಂಪಿ ಕನ್ನಡ ವಿವಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
2017-18ರ ಒಂದು ವರ್ಷದಲ್ಲಿ ಕನ್ನಡ ವಿವಿ 25.16 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಕೇವಲ 50ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಇದು ವಿವಿಗಳನ್ನು ಪರೋಕ್ಷವಾಗಿ ಕೊಲ್ಲುವ ಅಮಾನವೀಯವಾದ ಕೆಲಸವಾಗಿದೆ. ಕನ್ನಡದ ಕೆಲಸಗಳಿಗೆ, ಕನ್ನಡ ಜ್ಞಾನ ವಿಕಾಸಕ್ಕೆ ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದು ಅತ್ಯಂತ ನಾಚಿಕೆಗೇಡಿನ ವಿಚಾರ.
ನಿಮ್ಮ ಹಣಕಾಸು ಇಲಾಖೆ ಅಂಕಿ-ಸಂಖ್ಯೆಗಳು ನವೆಂಬರ್ ಅಂತ್ಯದ ವೇಳೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.3.08ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ ಎಂದು ಹೇಳುತ್ತದೆ. ಇದರಲ್ಲಿ ಸುಮಾರು 50 ಸಾವಿರ ಕೋಟಿ ರೂ.ಸಾಲ ಮಾಡಲಾಗಿದೆ. ಈ ಹಣವನ್ನು ಏನು ಮಾಡುತ್ತಿದ್ದೀರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹಂಪಿ ಕನ್ನಡ ವಿವಿಗೆ ಸರಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಕೇಳಿ ನನಗೆ ಆಘಾತವಾಗಿದೆ. 4ರಿಂದ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಕೇವಲ 50 ಲಕ್ಷ ರೂ.ನಿಗದಿಪಡಿಸಿ 25 ಲಕ್ಷ ರೂ.ಗಳನ್ನಷ್ಟೇ ಬಿಡುಗಡೆ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಮತ್ತು ದುರಂತದ ಸಂಗತಿ ಬೇರೆ ಇದೇಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ಅಲ್ಲಿನ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಕಾರಣ ಎಂದು ಹೇಳಿದ್ದೇನೆಯೇ ಹೊರತು ರಾಜ್ಯ ಮಟ್ಟದ ನಾಯಕರೆಂದು ಹೇಳಿಲ್ಲ. ವಿಪರೀತಾರ್ಥ ಕಲ್ಪಿಸುವುದು ಬೇಡ.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ







