ಹೊರಟ್ಟಿಗೆ ಮೇಲ್ಮನೆ ಸಭಾಪತಿ ಸ್ಥಾನ ನೀಡುವಂತೆ ಜೆಡಿಎಸ್ ಪಟ್ಟು

ಬೆಂಗಳೂರು. ಡಿ.19: ಮೇಲ್ಮನೆಯಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲವಾಗಿ ನಿಲ್ಲಲು ಮುಂದಾಗಿರುವ ಹಿನ್ನೆಲೆಯಲ್ಲಿ ಪರಿಷತ್ ಸಭಾಪತಿಯಾಗಿರುವ ಪ್ರತಾಪಚಂದ್ರಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದಲ್ಲಿ, ಜೆಡಿಎಸ್‍ಗೆ ಸಭಾಪತಿ ಸ್ಥಾನ ನೀಡಬೇಕು ಎಂದು ಬೇಡಿಕೆಯಿಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಧಾನಪರಿಷತ್‍ನಲ್ಲಿ ಜೆಡಿಎಸ್‍ನ ಹಿರಿಯ ಸದಸ್ಯರಾಗಿರುವ ಬಸವರಾಜ ಹೊರಟ್ಟಿಯನ್ನು ಸಭಾಪತಿ ಮಾಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.
ಈಗಿನ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಮತ್ತು ಅವರ ಕುಟುಂಬ ದೇವೇಗೌಡ ಅವರಿಗೆ ನಿಷ್ಠರಾಗಿರುವುದರಿಂದ ಅವರು ಹುದ್ದೆ ಬಿಟ್ಟು ಕೊಡಲು ಯಾವುದೇ ತಕರಾರು ಮಾಡುವ ಸಾಧ್ಯತೆ ಇಲ್ಲ ಎಂದೂ ಜೆಡಿಎಸ್ ಮೂಲಗಳು ತಿಳಿಸಿವೆ.
ಸಭಾಪತಿ ಬಗ್ಗೆ ಮಾತುಕತೆ ಆಗಿಲ್ಲ: ಸಭಾಪತಿ ಪ್ರತಾಪಚಂದ್ರ ಶೆಟ್ಟಿಯ ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರವಾದ ಬಳಿಕ ಯಾರನ್ನು ಸಭಾಪತಿ ಮಾಡಬೇಕು ಅಥವಾ ಜೆಡಿಎಸ್‍ಗೆ ಆ ಸ್ಥಾನ ಬಿಟ್ಟುಕೊಡಬೇಕಾ ಎಂಬುದರ ಕುರಿತು ಬಿಜೆಪಿಯಲ್ಲಿ ಚರ್ಚೆಯಾಗಿಲ್ಲ. ಈಗಿರುವ ಸಭಾಪತಿ ಪದಚ್ಯುತಿಗೊಂಡ ಬಳಿಕ ಆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.







