ಕೊರೋನ ವೈರಸ್ ಪ್ರಾಣೀ ಮೂಲಕ ಪತ್ತೆ ಹಚ್ಚುವ ಪರಿಣತರ ತಂಡ ಚೀನಾಕ್ಕೆ: ಡಬ್ಲ್ಯುಎಚ್‌ಒ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಡಿ. 19: ಕೊರೋನ ವೈರಸ್‌ನ ಪ್ರಾಣಿ ಮೂಲ ಯಾವುದು ಎನ್ನುವುದನ್ನು ತನಿಖೆ ಮಾಡುವುದಕ್ಕಾಗಿ ಮುಂದಿನ ತಿಂಗಳು ಚೀನಾಕ್ಕೆ ಪ್ರಯಾಣಿಸಲಿರುವ ಅಂತರ್ ರಾಷ್ಟ್ರೀಯ ಪರಿಣತರ ತಂಡವೊಂದು ವುಹಾನ್ ನಗರಕ್ಕೆ ತೆರಳಲಿದೆ ಹಾಗೂ ಅಲ್ಲಿ ಮುಕ್ತವಾಗಿ ತನಿಖೆ ನಡೆಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ತಿಳಿಸಿದೆ.
ಅಂತರ್‌ರಾಷ್ಟ್ರೀಯ ಪರಿಣತರು ಜನವರಿ ತಿಂಗಳ ಮೊದಲ ವಾರದಲ್ಲಿ ಚೀನಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ಮುಖ್ಯಸ್ಥ ಮೈಕಲ್ ರಯಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಮಾರಕ ಸಾಂಕ್ರಾಮಿಕ ಕಾಯಿಲೆ ಕೊರೋನ ವೈರಸ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿ ವರದಿಯಾಗಿದೆ. ಸಾಂಕ್ರಾಮಿಕ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡಿದ್ದು, ಜಗತ್ತಿನಾದ್ಯಂತ ಸುಮಾರು 17 ಲಕ್ಷ ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 7.5 ಕೋಟಿ ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಸಾಂಕ್ರಾಮಿಕ ರೋಗಗಳ ತಜ್ಞರು ಮತ್ತು ಪ್ರಾಣಿ ಆರೋಗ್ಯ ಪರಿಣತರನ್ನೊಳಗೊಂಡ 10 ಅಂತರ್‌ರಾಷ್ಟ್ರೀಯ ಪರಿಣತರ ತಂಡವೊಂದನ್ನು ಚೀನಾಕ್ಕೆ ಕಳುಹಿಸಲು ವಿಶ್ವ ಆರೋಗ್ಯ ಸಂಸ್ಥೆಯು ತಿಂಗಳುಗಳಿಂದ ಸಿದ್ಧತೆಗಳನ್ನು ನಡೆಸುತ್ತಿದೆ.
ತನಿಖೆಗೆ ಚೀನಾದಿಂದ ಅಡ್ಡಿ: ಪಾಂಪಿಯೊ ಆರೋಪ
ಕೊರೋನ ವೈರಸ್ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಡಬ್ಲುಎಚ್‌ಒ)(ಡಬ್ಲುಎಚ್‌ಒ)ಯ ಪರಿಣತರು ನಡೆಸಲುದ್ದೇಶಿಸಿರುವ ತನಿಖೆಗೆ ಚೀನಾ ಅಡ್ಡಿ ಪಡಿಸುತ್ತಿದೆ ಹಾಗೂ ಸಾಂಕ್ರಾಮಿಕ ಸ್ಫೋಟಗೊಂಡ ಒಂದು ವರ್ಷದ ಬಳಿಕ ಚೀನಾವು ಪ್ರಶ್ನಾರ್ಹ ಲಸಿಕೆಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಅಮೆರಿಕ ಆರೋಪಿಸಿದೆ.
ಕೊರೋನ ವೈರಸ್ ಹೇಗೆ ಹರಡಿತು ಎಂಬ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಚೀನಾದ ಮೇಲೆ ಒತ್ತಡ ಹೇರುವಂತೆಯೂ ಅದು ಅಂತರ್‌ರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.
‘‘ಕೊರೋನ ವೈರಸ್ ಸ್ಫೋಟಗೊಂಡ ಸುಮಾರು ಒಂದು ವರ್ಷದ ಬಳಿಕವೂ, ಚೀನಾ ಕಮ್ಯುನಿಸ್ಟ್ ಪಕ್ಷವು ಸಾಂಕ್ರಾಮಿಕದ ವಿಷಯದಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿದೆ ಹಾಗೂ ಸಾಂಕ್ರಾಮಿಕದ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ನಡೆಸುತ್ತಿರುವ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದೆ’’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಶುಕ್ರವಾರ ಹೇಳಿದ್ದಾರೆ.







