ಬೆಂಗಳೂರು: ಎಲ್‍ಪಿಜಿ ಸಬ್ಸಿಡಿ ಕಡಿತ ವಿರೋಧಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಬೆಂಗಳೂರು, ಡಿ. 19: ಕೇಂದ್ರದ ಬಿಜೆಪಿ ಸರಕಾರ ಎಲ್‍ಪಿಜಿ ಸಬ್ಸಿಡಿ ಕಡಿತ, ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಆನಂದ ರಾವ್ ವೃತ್ತದಲ್ಲಿನ ಕಾಂಗ್ರೆಸ್ ಭವನದ ಬಳಿ ಪ್ರಧಾನಿ ನರೇಂದ್ರ ಮೋದಿ ವೇಷ ಧರಿಸಿ ಎಲ್‍ಪಿಜಿ ಸಿಲಿಂಡರ್ ಗಳೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಎಸ್.ಮನೋಹರ್ ಮಾತನಾಡಿ, ಕೇಂದ್ರ ಸರಕಾರ ಎಲ್‍ಪಿಜಿ ದರವನ್ನು ಏರಿಕೆ ಮಾಡುವ ಮೂಲಕ ಸಬ್ಸಿಡಿ ಕಡಿತಗೊಳಿಸಿ 1 ತಿಂಗಳ ಅವಧಿಯಲ್ಲಿ ನೂರು ರೂ. ಹೆಚ್ಚುವರಿ ಹಣವನ್ನು ಗ್ರಾಹಕರಿಂದ ವಸೂಲು ಮಾಡಿ ಜನರ ಮೇಲೆ ಹೊರೆ ಹಾಕುತ್ತಿದೆ ಎಂದು ದೂರಿದರು.
ಅಲ್ಲದೆ, ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ವಾಹನ ಸವಾರರಿಗೆ ತೀವ್ರ ಸಂಕಷ್ಟ ತಂದಿಟ್ಟಿದೆ. ಈ ದೇಶದ ಅನ್ನದಾತರು ಬಿಜೆಪಿ ಸರಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಮೋದಿ ರೈತರ ಸಾವನ್ನು ನಿರ್ಲಕ್ಷಿಸಿ ಪ್ರತಿನಿತ್ಯ ಅಗ್ಗದ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇವಲ ಚುನಾವಣೆಗಳನ್ನು ಗೆಲ್ಲಲು ಹೊರಟಿರುವ ಪ್ರಧಾನಿ ಮೋದಿ ದೇಶದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಇಂತಹ ಜನವಿರೋಧಿ ಸರಕಾರವನ್ನು ದೇಶ ಎಂದೂ ಕಂಡಿರಲಿಲ್ಲ. ಇವರಿಗೆ ರೈತರ ಬಗ್ಗೆ ಕನಿಷ್ಠ ಕಳಕಳಿ ಇದ್ದರೆ ಕೂಡಲೇ ರೈತ ವಿರೋಧಿ ಮಸೂದೆಗಳ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಜನಸಾಮಾನ್ಯರ ದಿನಬಳಕೆ ಎಲ್‍ಪಿಜಿ ಸಬ್ಸಿಡಿ ಕಡಿತ ಕೈಬಿಟ್ಟು ಹಾಗೂ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಮನೋಹರ್ ಎಚ್ಚರಿಕೆ ನೀಡಿದರು.
ಈ ವೇಳೆ ಮುಖಂಡರಾದ ಜಿ.ಜನಾರ್ದನ್, ಎ.ಆನಂದ್, ಇ.ಶೇಖರ್, ಎಂ.ಎ.ಸಲೀಂ, ಪ್ರಕಾಶ್, ಪುಟ್ಟರಾಜು, ಚಂದ್ರು, ಶಶಿಭೂಷಣ್, ಶೀಲಾ ಸೇರಿ ಇನ್ನಿತರರು ಹಾಜರಿದ್ದರು.






.jpg)
.jpg)
.jpg)
.jpg)

