ಅಮನಾ ಕವಿತೆಗಳು ಸಕಾರಾತ್ಮಕ ಚಿಂತನೆ ಬಿತ್ತಿವೆ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಡಿ.19: ಕೊರೋನ ಸೋಂಕು ಭಯಾನಕ ರೀತಿಯಲ್ಲಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಅಮನಾ ಕೋವಿಡ್-19 ಕುರಿತು ಬರೆದಿರುವ ಕವಿತೆಗಳು ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಬಿತ್ತಲು ಸಹಕಾರಿಯಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶನಿವಾರ ನಗರದ ನಯನ ಸಭಾಂಗಣದಲ್ಲಿ ಬಾಲಕಿ ಅಮನಾ ಬರೆದ ಎಕೋಸ್ ಆಫ್ ಸೋಲ್‍ಫುಲ್ ಪೋಯಮ್ಸ್ ಆಂಗ್ಲಕೃತಿ ಹಾಗೂ ಅಮನಾ ತಾಯಿ ಡಾ.ಲತಾ ಟಿ.ಎಸ್. ಅವರು ಕನ್ನಡಕ್ಕೆ ಅನುವಾದಿಸಿರುವ ‘ಅಂತರಂಗದ ತರಂಗ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ವಿಶ್ವದಾದ್ಯಂತ ಕೊರೋನ ಸೋಂಕು ಜನರನ್ನು ತಲ್ಲಣಗೊಳಿಸಿತ್ತು. ಇಂತಹ ಸಂದರ್ಭದಲ್ಲಿ ಅಮನಾ ಹಲವು ಕವಿತೆಗಳನ್ನು ರಚನೆ ಮಾಡಲಾಗಿದ್ದು, ಅವು ಜನರಲ್ಲಿನ ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ಸಹಕಾರಿಯಾಗಿವೆ. ಅರ್ಥಪೂರ್ಣವಾದ ಹಾಗೂ ಜಾಗೃತಿ ಮೂಡಿಸುವಂತ ಪ್ರಯತ್ನ ಅಮನಾ ಮಾಡಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.
ಕಳಕಳಿ, ಕಾಳಜಿ, ಅಂತಃಕರಣ, ಸಮಾಜದ ಬಗೆಗಿನ ಉದಾರತೆ ಎಲ್ಲವನ್ನು ಅಮನಾ ಬರೆದ ಅನೇಕ ಕವಿತೆಗಳಲ್ಲಿ ಕಾಣಬಹುದು. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಸಂದರ್ಭಕ್ಕೆ ತಕ್ಕಂತೆ ಯೋಚಿಸಿ, ಜನರಲ್ಲಿ ಸಕಾರಾತ್ಮಕ ಭಾವನೆಗಳನ್ನು ಬಿತ್ತುವಂತಹ ಕೆಲಸ ಮಾಡಿದ್ದಾರೆ. ಅದನ್ನು ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿರುವುದು ಮತ್ತೊಂದು ಸಾಧನೆಯಾಗಿದೆ ಎಂದು ಅವರು ಹೇಳಿದರು.
ಲೇಖಕ ಜೋಗಿ ಮಾತನಾಡಿ, ಮಕ್ಕಳು ಅರ್ಥವಾಗದ ಭಾಷೆಯಲ್ಲಿ ಮಾತನಾಡಿದ ವೇಳೆ ತಾಯಿಯು ಹೇಗೆ ಅನುವಾದ ಮಾಡುತ್ತಾರೋ, ಅದೇ ರೀತಿಯಲ್ಲಿ 12 ವರ್ಷದ ಬಾಲಕಿ ಅಮನಾಳ ಆಂಗ್ಲ ಕವಿತೆಗಳನ್ನು, ಲತಾ ಅವರು ಕನ್ನಡೀಕರಿಸಿರುವುದು ಶ್ಲಾಘನೀಯ. ಯಾವಾಗ ಒಬ್ಬ ವ್ಯಕ್ತಿ ತನ್ನ ಜೊತೆಗಿರುತ್ತಾನೋ ಆ ವ್ಯಕ್ತಿ ಮುಂದೊಂದು ದಿನ ಕವಿಯಾಗಲು ಸಾಧ್ಯ ಎಂದು ನುಡಿದರು.
ಕವಿ ಡಾ.ದೊಡ್ಡರಂಗೇಗೌಡ ಮಾತನಾಡಿ, ಅಮನಾ ಆಂಗ್ಲದಲ್ಲಿ ಕವಿತೆಗಳನ್ನು ರಚಿಸಿದ್ದರೂ, ಅದರಲ್ಲಿ ನಮ್ಮ ಸಂಸ್ಕೃತಿ, ಪ್ರಕೃತಿಯ ಸೊಗಡು ತುಂಬಿದೆ. ಮಗಳು ಬರೆದ ಕಾವ್ಯ ಕೃತಿಯನ್ನು ತಾಯಿ, ಕನ್ನಡಕ್ಕೆ ತಂದಿದ್ದಾರೆ. ಇವೆರಡೂ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆಯಾಗಿದೆ. ಸಾಹಿತ್ಯ ಕೃತಿಗಳನ್ನು ಓದಿ ಕೆಟ್ಟವರು ಯಾರೂ ಇಲ್ಲ. ಸಾಹಿತ್ಯ ಓದುಗರಿಗೆ ಸಾಗರ ರೂಪದ ಜ್ಞಾನ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಷಪ್ ಕಾಟನ್ ಬಾಲಕಿಯರ ಶಾಲೆ ಪ್ರಾಂಶುಪಾಲೆ ಡಾ.ಲಾವಣ್ಯ ಮಿತ್ರನ್, ಬಾಲಕಿ ಅಮನಾ, ಅನುವಾದಕಿ ಡಾ.ಟಿ.ಎಸ್.ಲತಾ ಸೇರಿದಂತೆ ಹಲವರಿದ್ದರು.
.jpg)







