ಕೃಷಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ಮತ್ತೊಂದು ಜೆಪಿ ಚಳವಳಿ ಅನಿವಾರ್ಯ: ಹೋರಾಟಗಾರ ಮಲ್ಲೇಶ್
ರೈತ ಹೋರಾಟ ಬೆಂಬಲಿಸಿ ಐಕ್ಯ ಹೋರಾಟ ವೇದಿಕೆ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು, ಡಿ. 19: ಕೃಷಿ ಕಾನೂನುಗಳ ತಿದ್ದುಪಡಿ ಮಾಡಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಇಲ್ಲಿನ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ದಲಿತ, ರೈತ, ಕಾರ್ಮಿಕರ ಐಕ್ಯ ಹೋರಾಟ ವೇದಿಕೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಇಲ್ಲಿನ ಮೌರ್ಯ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಶ್ಫಕುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಅವರ ಹುತಾತ್ಮ ದಿನಾಚರಣೆ ಹಿನ್ನೆಲೆಯಲ್ಲಿ, ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಐಕ್ಯ ಹೋರಾಟದ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು. ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದು ಜೆಪಿ ಚಳುವಳಿ ಅನಿವಾರ್ಯ: ಕೇಂದ್ರದ ಮೋದಿ ಸರಕಾರ ಒಂದಾದ ಮೇಲೊಂದು ಅನಾಗರಿಕ, ಅನೈತಿಕ ಕಾನೂನುಗಳನ್ನು ಜನರ ಮೇಲೆ ಹೇರುತ್ತಿದೆ. ಅದರ ವಿರುದ್ದ ಪ್ರತಿಭಟಿಸುತ್ತಿರುವ ರೈತರನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತದೆ ಹಾಗೂ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳುವ ಬದಲು ರೈತರನ್ನು ರಾಜಿಗೆ ಆಹ್ವಾನಿಸುತ್ತಿದೆ ಎಂದು ಹೋರಾಟಗಾರ ಪ.ಮಲ್ಲೇಶ್ ದೂರಿದರು.
ರೈತರು ತಮ್ಮ ಬದುಕಿಗೆ ಮಾರಕವಾಗಿರುವ ಈ ಕಾನೂನಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಹಾಗೂ ಮಾಡಿಕೊಳ್ಳಬಾರದು. ಹಲವು ದಶಕಗಳಿಂದ ಈ ದೇಶದಲ್ಲಿ ರೈತರು ಮತ್ತು ಕಾರ್ಮಿಕರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಇನ್ನೊಂದು ಜೆಪಿ ಚಳುವಳಿ ಅನಿವಾರ್ಯ. ಇಡೀ ಸಮಾಜವನ್ನು ಹಾಳು ಮಾಡಿರುವ ಇಂದಿನ ಸರಕಾರಿ ವ್ಯವಸ್ಥೆ ಸ್ಥಗಿತ ಆಗುವಂತೆ ಜೈಲ್ ಭರೋ ಚಳುವಳಿ ನಡೆಯಬೇಕು. ಆಗ ಮಾತ್ರವೇ ದೇಶದ ಜನರು ನೆಮ್ಮದಿಯ ನಾಳೆಗಳನ್ನು ನೋಡಬಹುದು ಎಂದು ಸಲಹೆ ಮಾಡಿದರು.
ಮರಣ ಶಾಸನ: ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ಸರಕಾರದ ನೀತಿಗಳು ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯ ಇವುಗಳ ಮೇಲೆ ಪ್ರಹಾರ ಮಾಡುತ್ತಿವೆ. ಯಾವುದೇ ರೀತಿಯ ಸಾಂವಿಧಾನಿಕ ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ಈ ಕಾಯ್ದೆಯನ್ನು ಹೇರಲಾಗಿದೆ. ಭೂ ಸುಧಾರಣಾ ಕಾಯ್ದೆ ರೈತರಿಗೆ ಮರಣ ಶಾಸನವಾಗಿದೆ ಎಂದು ಟೀಕಿಸಿದರು.
ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ನೀಡಬಾರದು. ಹಾಗೆಯೇ ಕಾರ್ಪೋರೇಟ್ ಕಂಪೆನಿಗಳಿಗೂ ಕೃಷಿಭೂಮಿಯನ್ನು ನೀಡುವುದು ಸರಿಯಲ್ಲ. ಉಳುವವನೇ ಭೂಮಿಯ ಒಡೆಯ ಎಂಬ ಮಾತನ್ನು ಮತ್ತೆ ಮತ್ತೆ ಒತ್ತಿ ಹೇಳಬೇಕಾಗಿದೆ. ಈ ಕಾಯ್ದೆ ರೈತ ವಿರೋಧಿ ಅಷ್ಟೇ ಅಲ್ಲ, ಜನವಿರೋಧಿ. ಈ ಕಾಯ್ದೆಗಳನ್ನು ಹಿಮ್ಮೆಟ್ಟಿಸಲು ಪ್ರಬಲವಾದ ಹೋರಾಟದ ಅವಶ್ಯಕತೆ ಇದೆ ಎಂದು ಹಿರೇಮಠ್ ಕರೆ ನೀಡಿದರು.
ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿ ಕಾರ್ಯದರ್ಶಿ ಎಚ್.ವಿ.ದಿವಾಕರ್ ಮಾತನಾಡಿ, ಸರಕಾರವು ಕೃಷಿ ನೀತಿಗಳು ರೈತರಿಗೆ ಅನುಕೂಲವಾಗಿದೆ ಎಂದು ಹೇಳುತ್ತಲೇ ಕೃಷಿಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗಿಕರಣ ಮಾಡಲು ಮುಂದಾಗಿದೆ. ಅದಕ್ಕೆ ಅಗತ್ಯ ವಸ್ತುಗಳ ಕಾಯ್ದೆ ಜಾರಿಯಾದರೆ ಖಾಸಗಿ ಕಂಪೆನಿಗಳು ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಈರುಳ್ಳಿ ಮುಂತಾದವುಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ನಂತರ ಬೆಲೆಗಳನ್ನು ಏರಿಸಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವ ಹುನ್ನಾರ ಅಡಗಿದೆ ಎಂದು ದೂರಿದರು.
ಎಂಪಿಎಂಸಿ ತಿದ್ದುಪಡಿ ಕಾಯ್ದೆ ಸರಕಾರಿ ಮಂಡಿಗಳನ್ನು ನಾಶಮಾಡಿ ಖಾಸಗಿ ಮಂಡಿಗಳು ತೆರೆಯಲು ಅವಕಾಶ ನೀಡಲಿದೆ. ಪೊಲೀಸ್ ದೌರ್ಜನ್ಯವನ್ನು ಎದುರಿಸಿ, ಕೊರೆಯುವ ಚಳಿಯಲ್ಲಿ ರೈತರು ಅಭೂತಪೂರ್ವವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ನೀತಿಗಳು ವಾಪಸ್ ಆಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಅವರು ಎಚ್ಚರಿಸಿದರು.
ಮುಖಂಡರಾದ ಸುನೀತ್ ಕುಮಾರ್, ಕುರುಬೂರು ಶಾಂತಕುಮಾರ್ ಹಾಗೂ ಇತರ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿದರು ಹಾಗೂ ರೈತರ ಹೋರಾಟಕ್ಕೆ ದನಿಗೂಡಿಸಿದರು.







