ಮೃತದೇಹ ಸಾಗಿಸಲು ಪಿಎಸ್‍ಐ ವಸೀಂ ಉಲ್ಲಾ ಆರ್ಥಿಕ ಸಹಾಯ: ಸಾರ್ವಜನಿಕರ ಮೆಚ್ಚುಗೆ

ಬೆಂಗಳೂರು, ಡಿ.19: ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ್ದ ಮಗಳ ಮೃತದೇಹವನ್ನು ಮನೆಗೆ ಸಾಗಿಸಲು ಹಣಕ್ಕಾಗಿ ಪರದಾಡುತ್ತಿದ್ದ ಕುಟುಂಬಕ್ಕೆ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ವಸೀಂ ಉಲ್ಲಾ ಹಣ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು, ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.
ಮೃತ ಯುವತಿಯ ಮರಣೋತ್ತರ ಪರೀಕ್ಷೆ ಹಾಗೂ ಆಂಬುಲೆನ್ಸ್ ಮೂಲಕ ಮೃತದೇಹ ಸಾಗಿಸಲು ಕುಟುಂಬದವರಿಗೆ ಹಣದ ಕೊರತೆ ಎದುರಾಗಿತ್ತು. ಇದನ್ನು ಗಮನಿಸಿದ ಪಿಎಸ್‍ಐ ವಸೀಂ ಉಲ್ಲಾ ಸಂತ್ರಸ್ತ ಯುವತಿಯ ಕುಟುಂಬದವರಿಗೆ 14 ಸಾವಿರದಷ್ಟು ಹಣವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದರು.
ಘಟನೆ ಏನು..?: ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಅನ್ಯರಾಜ್ಯದ ಯುವತಿ ಮೂರು ದಿನಗಳ ಹಿಂದೆ ಕಾಲೇಜಿಗೆ ಶುಲ್ಕ ಪಾವತಿಸಲು ನಗರಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಆಕೆಯ ಸ್ನೇಹಿತ ತಮ್ಮ ರೂಂಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದನು. ಈ ವೇಳೆ ಯುವತಿ ಸಾವನ್ನಪ್ಪಿದ್ದಳು.
ಈ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ಪರೀಕ್ಷೆ ಮುಗಿದಿದ್ದು, ಮೃತದೇಹವನ್ನು ತಮ್ಮ ಮನೆಗೆ ಕೊಂಡೊಯ್ಯಲು ಕುಟುಂಬದವರು ಹಣಕಾಸಿನ ತೊಂದರೆಗೆ ಒಳಗಾಗಿದ್ದರು. ಇದನ್ನು ಮನಗಂಡ ಪಿಎಸ್‍ಐ ಹಣದ ನೆರವು ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವಸೀಂ ಉಲ್ಲಾ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಾನು ಸಹಾಯ ಮಾಡಿದ್ದೇನೆ. ಇದು ನನ್ನ ಮನಸ್ಸಿಗೆ ಸಮಾಧಾನ ಕೊಟ್ಟ ಸಂಗತಿ ಎಂದು ಹೇಳಿದ್ದಾರೆ.







