ಮಂಗಳೂರು ವಿಶ್ವವಿದ್ಯಾನಿಲಯದ 41 ನೇ ಸಂಸ್ಥಾಪನಾ ದಿನಾಚರಣೆ

ಕೊಣಾಜೆ: ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೌಶಲವನ್ನು ಬೆಳೆಸುವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಮಹತ್ವಪೂರ್ಣವಾದುದು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮಹತ್ವಪೂರ್ಣ ಯೋಜನೆಯೊಂದಿಗೆ ಮುನ್ನಯುತ್ತಿದೆ ಎಂದು ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕರು ಆರ್.ಸತ್ಯನಾರಾಯಣ ಅವರು ಹೇಳಿದರು.
ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಸಿಬ್ಬಂದಿಗಳ ಪಾತ್ರವೂ ಮುಖ್ಯವಾದುದು. ಅಲ್ಲದೆ ವಿದ್ಯಾರ್ಥಿಗಳ ಸಾಮುದಾಯಿಕ ಪಾಲ್ಗೊಳ್ಳುವಿಕೆ, ಕೈಗಾರಿಕಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಹೀಗೆ ಹತ್ತು ಯೋಜನೆ ರೂಪಿಸಿಕೊಂಡು ಮುನ್ನಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಬೇರೆ ವಿಶ್ವವಿದ್ಯಾಲಯಗಳು ಮಂಗಳೂರು ವಿವಿಯನ್ನು ಮಾದರಿಯನ್ನಾಗಿ ನೋಡುವ ಕಾರ್ಯವಾಗಬೇಕು ಎಂದರು.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ಸಾಮಾಜಿಕ ಜಾಲತಾಣದ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ,
ನವಭಾರತದ ನಿರ್ಮಾಣದ ಕಲ್ಪನೆಯಲ್ಲಿ ಸರ್ಕಾರ ನೂತನ ಶಿಕ್ಷಣ ನೀತಿಯ ಪಾತ್ರ ಪ್ರಮುಖವಾದದ್ದು. ಈ ನೀತಿಯನ್ನು ಬಲವಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯ ಶೀಘ್ರದಲ್ಲೇ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ಹೇಳಿದರು.
ಸಿಂಡಿಕೇಟ್ ಸದಸ್ಯ ಪ್ರೊ.ಕರುಣಾಕರ್ ಎ. ಕೋಟೆಗಾರ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ 2020 ಇದರ ವೀಡಿಯೋ ಸರಣಿಯ ಲೋಕಾರ್ಪಣೆಯ ಕುರಿತು ಮಾತನಾಡಿ, ಆಂಗ್ಲ ಭಾಷೆಯಲ್ಲಿ 63 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅರ್ಥೈಸಲು ಬಹಳ ಕಷ್ಟ ಆಗಿತ್ತು. ಎಲ್ಲರಿಗೂ ಸುಲಭವಾಗಿ ಸಾಮಾನ್ಯ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಈ ವೀಡಿಯೋವನ್ನು ರೂಪಿಸಲಾಗಿದೆ. ಐದು ಗಂಟೆಯ ವೀಡಿಯೋವನ್ನು ಒಂದು ತಿಂಗಳಲ್ಲಿ ಸಿದ್ಧಪಡಿಸಲಾಗಿದೆ. ನಾಲ್ಕು ಭಾಗ, 27 ಅಧ್ಯಾಯಗಳಿವೆ ಎಂದರು.
ಶಿಕ್ಷಣ ಸಂಸ್ಥೆಗಳು ಪದವಿ ನೀಡುವಲ್ಲಿ ಉತ್ಸುಕತೆ ತೋರಿಸುತ್ತವೆ ಆದರೆ ಉತ್ತಮ ಶಿಕ್ಷಣ ನೀಡುವಲ್ಲಿ ಹಿಂದೆ ಬೀಳುತ್ತವೆ. ಆದರೆ ನೂತನ ಶಿಕ್ಷಣ ನೀತಿಯು ಇದಕ್ಕೆಲ್ಲ ಪರಿಣಾಮಕಾರಿಯಾಗಿ ರೂಪಿಸಲಾಗಿದೆ ಎಂದರು.
85% ಬೆಳವಣಿಗೆ ಎಂಟು ವರ್ಷದ ಒಳಗೆ ಆಗುವಂತಹದ್ದು. ಆದ್ದರಿಂದ ಈ ನೂತನ ವ್ಯವಸ್ಥೆಯಲ್ಲಿ ನಾಲ್ಕನೇ ವಯಸ್ಸಿನಿಂದಲೇ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈನೀತಿಯು ಮಾನವಿಕ ಸೋಶಿಯಲ್ ಸೈಯನ್ಸ್, ಮೂಲ ವಿಜ್ಣಾನ, ಸಂಸ್ಕೃತಿ, ಕಲೆ ಮೊದಲಾದವುಗಳನ್ನು ಕಲಿಯಲು ಅವಕಾಶ ಕಲ್ಪಿಸಿದೆ.
ಬರೀ ಮೆಡಿಸಿನ್, ಬರೀ ಇಂಜಿನಿಯರಿಂಗ್ ಕಲಿತರೆ ಬದುಕಿನ ಸ್ಪೂರ್ತಿ ಸಿಗಲ್ಲ ಅದರೊಂದಿಗೆ ಇಂತಹ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಇಂಜಿನಿಯರಿಂಗ್ ಮುಗಿಸಿ ಅಮೇರಿಕಕ್ಕೆ ಹೋದವ ಮಾನಸಿಕವಾಗಿ ಭಾರತದಲ್ಲಿಯೇ ಇರುತ್ತಾನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ವಹಿಸಿ ಮಾತನಾಡಿ, ಮಂಗಳೂರು ವಿವಿಯನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ಐದು ಗ್ರಾಮಗಳನ್ನು, ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ತಗೆದುಕೊಂಡು ಕಾರ್ಯ ಆರಂಭಿಸಿದೆ ಎಂದರು. ಅಲ್ಲದೆ ಮಂಗಳೂರು ವಿವಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಭೋಜನ, ಬೆಳಪುವಿನಲ್ಲಿ ಐದು ಸ್ನಾತಕೋತ್ತರ ವಿಭಾಗ ಸ್ಥಾಪನೆ, ಡಾ.ವಿ.ಎಸ್.ಆಚಾರ್ಯ ಸೆಂಟರ್ ಫಾರ್ ಕೋಸ್ಟಲ್ ಡೆವಲೆಪ್ ಮೆಂಟ್, ಅಂಬೇಡ್ಕರ್ ಸಂಶೋಧನಾ ಕೇಂದ್ರ ವಿದ್ಯಾರ್ಥಿ ಅಧಾಲತ್, ವಿವೇಕಾನಂದ ಅಧ್ಯಯನ ಪೀಠ, ಮುದ್ದಣ ಕವಿ ಪೀಠ, ಅರೆಭಾಷೆ ಅಧ್ಯಯನ ಪೀಠ, ಕುಂದಾಪುರ ಕನ್ನಡ ಅಧ್ಯಯನ ಪೀಠಗಳು ಸ್ಥಾಪನೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ರಾಜು ಮೊಗವೀರ, ಹಣಕಾಸು ಅಧಿಕಾರಿ ಪ್ರೊ.ನಾರಾಯಣ್, ಡೀನ್ ಪ್ರೊ.ಮುನಿರಾಜು, ಜೆರಾಲ್ಡ್ ಸಂತೋಷ್ ಡಿಸೋಜ, ಪ್ರೊ.ಪಟ್ಟಾಭಿ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ.ರವಿಶಂಕರ್ ರಾವ್ ಹಾಗೂ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.