ಚುನಾವಣಾ ದ್ವೇಷಕ್ಕೆ ಎರಡು ಸಾವಿರ ಅಡಿಕೆ ಗಿಡಗಳ ದ್ವಂಸ: ಆರೋಪ
ನ್ಯಾಯಕ್ಕೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ

ಶಿವಮೊಗ್ಗ, ಡಿ.20: ಚುನಾವಣೆ ದ್ವೇಷದಿಂದ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಸೇರಿದ ಎರಡು ಸಾವಿರ ಅಡಿಕೆ ಗಿಡಗಳನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಧರಣಿ ಆರಂಭಿಸಿದ್ದಾರೆ.
ಅರಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಸು ವಾರ್ಡ್ ನಿಂದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುಪ್ರೀತಾ ರಂಜನ್ ಎಂಬುವವರು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಇವರನ್ನು ಕಣದಿಂದ ಹಿಂದೆ ಸರಿಸಲು ಶಾಸಕ ಅರಗ ಜ್ಞಾನೇಂದ್ರ, ತಾಲೂಕು ಪಂಚಾಯತ್ ಸದಸ್ಯ ಚಂದುವಳ್ಳಿ ಸೋಮಶೇಖರ್ ಮತ್ತು ಕುಕ್ಕೆಪ್ರಶಾಂತ್ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ “ನಿಮ್ಮದು ಬಗರ್ ಹುಕುಂ ಭೂಮಿ, ಅದು ಬೇಕಿದ್ದರೆ ಚುನಾವಣಾ ಕಣದಿಂದ ಹಿಂದೆ ಸರಿಯಿರಿ” ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯ ಮೂಲಕ ಸುಪ್ರೀತಾರಿಗೆ ಬೆದರಿಕೆ ಹಾಕಿಸಿದ್ದಾರೆನ್ನಲಾಗಿದೆ.
ಆದರೆ ಇದ್ಯಾವುದಕ್ಕೂ ಮಣಿಯದ ಸುಪ್ರೀತಾ ಚುನಾವಣಾ ಕಣದಲ್ಲಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಏಕಾಏಕಿ ಸುಪ್ರೀತಾ ರಂಜನ್ ಅವರು ಸಾಗುವಳಿ ಭೂಮಿಯಲ್ಲಿ ನೆಟ್ಟಿದ್ದ ಸುಮಾರು 2,000 ಅಡಿಕೆ ಸಸಿಯನ್ನು ನಾಶ ದ್ವಂಸ ಮಾಡಿದ್ದಾರೆ ಎಂದು ಧರಣಿನಿರತರು ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಕಿಮ್ಮನೆ ರತ್ನಾಕರ್, ಈ ಎಲ್ಲ ಘಟನೆಗೆ ಶಾಸಕ ಅರಗ ಜ್ಞಾನೇಂದ್ರ ಕಾರಣ.ಅವರ ಕುಮ್ಮಕ್ಕಿನಿಂದ ಬಡ ಮಹಿಳೆಯ ಅಡಿಕೆ ಫಸಲನ್ನು ದ್ವಂಸ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆಡಳಿತದ ಕೈಗೊಂಬೆಯಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡುವವರೆಗೂ ಧರಣಿ ನಡೆಸುವುದಾಗಿ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ:
ಕೃಷಿ ನಾಶಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ, ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅರಣ್ಯ ಇಲಾಖೆಯ ಕ್ರಮ ಖಂಡನೀಯ.ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರ ಜೊತೆ ಮಾತನಾಡಿದ್ದೇನೆ.ಜೊತೆಗೆ ಮುಖ್ಯಮಂತ್ರಿ ಜೊತೆಗೂ ಮಾತನಾಡುತ್ತೇನೆ” ಎಂದು ತಿಳಿಸಿದ್ದಾರೆ.








